ಹೊಸದಿಂಗತ ಡಿಜಿಟಲ್ ಡೆಸ್ಕ್:
ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಲು ನಾವು ಶಕ್ತಿ ಅಂತ ಕಾರ್ಯಕ್ರಮ ಮಾಡಿದ್ದೇವೆ. ಐದು ಗ್ಯಾರಂಟಿಗಳಲ್ಲಿ 4 ಗ್ಯಾರಂಟಿ ಮಹಿಳೆಯರಿಗೆ ಸಂಬಂಧಿಸಿದ್ದು, ಅದಕ್ಕೆ ಹಲವರು ಗೇಲಿ ಮಾಡುತ್ತಿದ್ದಾರೆ. ಆದರೆ ನಾವು ಯಾವುದಕ್ಕೂ ಸೊಪ್ಪು ಹಾಕಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.
ದೀಪ ಬೆಳಗುವುದರ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಈಗಾಗಲೇ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೇವೆ. ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇವೆ ಮತ್ತು ಸಂತೋಷದಿಂದಲೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದರು.
ಮಹಿಳೆಯರು ಸಮಾಜದಲ್ಲಿ ಅರ್ಧದಷ್ಟು ಇದ್ದಾರೆ. ಶತಶತಮಾನಗಳಿಂದ ಮಹಿಳೆಯರು ಅವಕಾಶ ವಂಚಿತರಾಗಿದ್ದಾರೆ. ಸಾಮಾಜಿಕ ಅಸಮಾನತೆಗೆ ಮಹಿಳೆಯರು ಒಳಗಾಗಿದ್ದಾರೆ. ಪ್ರಸ್ತುತ ಭಾರತದಲ್ಲಿ 24% ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿದ್ದಾರೆ. 2014ರ ನಂತರ 24% ಇಳಿದಿದೆ. ಈ ಮೊದಲು 30% ಇತ್ತು ಎಂದು ಹೇಳಿದರು.
ಮಹಿಳೆಯರ ಬಗ್ಗೆ ಕೆಲವರು ಮೊಸಳೆ ಕಣ್ಣಿರು ಸುರಿಸ್ತಾರೆ. ಮನುವಾದಿಗಳು ಮಹಿಳೆಯರ ಅಸಮಾನತೆಯನ್ನು ಬಯಸುತ್ತಾರೆ. ಮನೆಯಿಂದ ಹೊರ ಹೋಗಬಾರದು ಅಂತ ಬಯಸ್ತಾರೆ. ಆದರೆ ಮಹಿಳೆಯರು ಹೆಚ್ಚು ಸಾರ್ವಜನಿಕವಾಗಿ ಭಾಗಿಯಾದಾಗ, ಆ ದೇಶ ಅಭಿವೃದ್ಧಿಯಾಗುತ್ತದೆ. ಹೀಗಾಗಿ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಲು ನಾವು ಶಕ್ತಿ ಅಂತ ಕಾರ್ಯಕ್ರಮ ಮಾಡಿದ್ದೇವೆ. ಐದು ಗ್ಯಾರಂಟಿಗಳಲ್ಲಿ 4 ಗ್ಯಾರಂಟಿ ಮಹಿಳೆಯರಿಗೆ ಸಂಬಂಧಿಸಿದ್ದು. ಹೀಗಾಗಿ ಕೆಲವರು ಗೇಲಿ ಮಾಡಿ ಕುಹುಕ ಮಾಡುತ್ತಾರೆ. ನಾವು ಯಾವುದಕ್ಕೂ ಸೊಪ್ಪು ಹಾಕಲ್ಲ. ಟೀಕೆ ಮಾಡುವವರು ಮನುಸ್ಮೃತಿಯ ಮನುಷ್ಯರು. ಅವರು ಮನುವಾದಿಗಳು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
200 ಯೂನಿಟ್ ವಿದ್ಯುತ್ ಎಲ್ಲರಿಗೂ ಕೊಡಿ ಅಂತಾರೆ, 70 ಯೂನಿಟ್ ಬಳಿಸಿದ್ರು 200 ಯೂನಿಟ್ ಕೊಡಿ ಅಂತಾರಲ್ಲ ಇದಕ್ಕೆ ಅರ್ಥವಿದೆಯಾ? ಬಂಡವಾಳ ಶಾಹಿಗಳಿಗೆ, ಕೈಗಾರಿಕೆಗಳಿಗೆ ಕೊಡ್ತೀವಿ ಅಂತ ನಾವು ಹೇಳಿಲ್ಲ. ಬಿಜೆಪಿ 600 ಭರವಸೆ ಕೊಟ್ಟಿತ್ತು. ಅದರಲ್ಲಿ 60% ಸಹ ಈಡೇರಿಸಿಲ್ಲ. ಆದರೆ ಎಲ್ಲ ಜಾತಿಯ, ಎಲ್ಲ ಧರ್ಮದ ಬಡವರಿಗೆ ನಮ್ಮ ಸರ್ಕಾರ ಆರ್ಥಿಕ ಶಕ್ತಿ ತುಂಬುತ್ತದೆ. ಗೇಲಿ ಮಾತುಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ನಾವು ನುಡಿದಂತೆ ನಡೆದಿದ್ದೇವೆ ಮತ್ತು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದರು.
ಎಲ್ಲ ಗ್ಯಾರಂಟಿಗಳನ್ನು ನಾವು ಈಡೇರಿಸೇ ತಿರುತ್ತೇವೆ. ಗ್ಯಾರಂಟಿ ಯೋಜನೆಗಳಿಗೆ 59 ಸಾವಿರ ಕೋಟಿ ರೂಪಾಯಿ ಖರ್ಚು ಆಗುತ್ತದೆ. ಅನ್ನಭಾಗ್ಯ ಯೋಜನೆಗೆ ಹಣ ಇಲ್ಲ ಅಂದರು. ಅಂದೆ ಹೇಳಿದ್ದೆ ನೀವು ಅಧಿಕಾರ ಬಿಡಿ, ನಾವು ಬಂದು ಮಾಡುತ್ತೇವೆ ಅಂತ. 10 ಸಾವಿರ ಕೋಟಿ ಅನ್ನಭಾಗ್ಯ ಯೋಜನೆಗೆ ಬೇಕು. ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕು. ಹೊಟ್ಟೆ ತುಂಬಿದವರಿಗೆ ಹಸಿವಿನ ಬಗ್ಗೆ ಗೊತ್ತಾಗಲ್ಲ, ಬಡವರಿಗೆ ಮಾತ್ರ ಹಸಿವಿನ ಬೆಲೆ ಗೊತ್ತಿದೆ ಎಂದು ಹೇಳಿದರು.