ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ವಿವಿದೆಡೆ ಸಾಮಾನ್ಯವಾಗಿ ಸರಕಾರದ ವತಿಯಿಂದ ಅಥವಾ ಟ್ರಸ್ಟ್ಗಳ ವತಿಯಿಂದ ಹಲವು ಸಾಮೂಹಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಇಲ್ಲಿ ನೂರಾರು ಸಂಖ್ಯೆಯಲ್ಲಿ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.
ಆದ್ರೆ ಮೇ 26ರಂದು ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 2,143 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ವಿಶ್ವದಾಖಲೆ ನಿರ್ಮಾಣವಾಗಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿವ ಪ್ರಮೋದ್ ಜೈನ್ ಭಾಯಾ ಅವರ ಸಮ್ಮುಖದಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಹಸೆ ಮಣೆ ಏರಿದ ನವ ದಂಪತಿಗಳಿಗೆ ಆಶೀರ್ವದಿಸಿದರು.
12 ಗಂಟೆಗಳಲ್ಲಿ 2,143 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಕಾರ್ಯಕ್ರಮ ಗಿನ್ನೆನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.
ಈ ಹಿಂದೆ 2013ರಲ್ಲಿ 963 ಜೋಡಿ ಮದುವೆಯಾಗಿದ್ದು, ಅದು ದಾಖಲೆಯನ್ನು ಹೊಂದಿತ್ತು.
ಈ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶ್ರೀ ಮಹಾವೀರ ಗೋಶಾಲಾ ಕಲ್ಯಾಣ ಸಂಸ್ಥಾನವು ಆಯೋಜಿಸಿದೆ. ಇದು ಹಿಂದುಳಿದ ಸಮುದಾಯಗಳಿಗೆ ಸೇವೆ ಸಲ್ಲಿಸಲು ಮೀಸಲಾಗಿರುವ ನೋಂದಾಯಿತ ಟ್ರಸ್ಟ್ ಆಗಿದೆ. ಸಮಾರಂಭದಲ್ಲಿ ಹಿಂದೂ ಹಾಗೂ ಮುಸ್ಲಿಂ ಧರ್ಮದ ಜೋಡಿಗಳು ವಿವಾಹವಾದರು. ಮದುವೆಯ ವಿಧಿವಿಧಾನಗಳನ್ನು ಪ್ರತಿ ದಂಪತಿಯ ಆಯಾ ಸಮುದಾಯದ ಪುರೋಹಿತರು ಹಾಗೂ ಕ್ವಾಜಿಗಳು ನೆರವೆರಿಸಿದರು.
ಮದುವೆ ನಂತರ ಪ್ರತಿ ದಂಪತಿಗೆ ಆಭರಣ, ಹಾಸಿಗೆ, ಅಗತ್ಯ ಅಡುಗೆ ಪಾತ್ರೆಗಳು, ದೂರದರ್ಶನ, ರೆಫ್ರಿಜರೇಟರ್ಮ ಕೂಲರ್ನಂತಹ ಗೃಹೋಪಯೋಗಿ ಉಪಕರಣಗಳನ್ನು ಉಡುಗೊರೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ನೂತನ ವಧು ವರರಿಗೆ ಆಶೀರ್ವದಿಸಿದ್ದಾರೆ.