ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಟುಂಬದಲ್ಲಿನ ಕೆಲವು ಬಂಧಗಳು ಮನಸ್ಸಿಗೆ ತುಂಬಾ ಹತ್ತಿರವಾಗಿರುತ್ತವೆ, ತುಸು ನೋವಾದರೂ ಪ್ರತಿಯೊಬ್ಬರ ಮನ ಮಿಡಿಯುವಷ್ಟು ಹತ್ತಿರವಾಗಿರುತ್ತವೆ. ಹಾಗೆಯೇ ಒಬ್ಬರ ಸಾವನ್ನು ಅರಗಿಸಿಕೊಳ್ಳಲಾಗದೆ ಇಡೀ ಕುಟುಂಬವೇ ಸಾವಿನ ಕದ ತಟ್ಟಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಒಂದೇ ಕುಟುಂಬದಲ್ಲಿ ನಾಲ್ವರು ಸಾವನ್ನಪ್ಪಿದ್ದರಿಂದ ಈ ಪ್ರದೇಶದಲ್ಲಿ ರೋದನ ಮುಗಿಲು ಮುಟ್ಟಿತ್ತು. ಈ ಸಾವುಗಳನ್ನು ಅರಗಿಸಿಕೊಳ್ಳಲು ಅವರ ಬಂಧುಗಳಿಗೂ ಸಾಧ್ಯವಾಗುತ್ತಿಲ್ಲ. ತಮ್ಮ ಜೊತೆ ಕಳೆದ ಕ್ಷಣಗಳನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ವಿವರಕ್ಕೆ ಹೋದರೆ…ಹೈದರಾಬಾದ್ ಬೋಯಿನಪಲ್ಲಿಯ ಮನೆಯೊಂದರಲ್ಲಿ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದೆ. ತಾಯಿ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು ಸಾವಿಗೆ ಶರಣಾಗಿದ್ದಾರೆ. ಇತ್ತೀಚೆಗಷ್ಟೇ ತಂದೆ ತೀರಿಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಮೃತರನ್ನು ತಾಯಿ ವಿಜಯಲಕ್ಷ್ಮಿ, ಪುತ್ರಿಯರಾದ ಚಂದ್ರಕಲಾ ಮತ್ತು ಸೌಜನ್ಯ ಎಂದು ಗುರುತಿಸಲಾಗಿದೆ.
ಇತ್ತೀಚೆಗಷ್ಟೇ ಪತಿ ಅನಾರೋಗ್ಯದಿಂದ ಸಾವಿಗೀಡಾಗಿದ್ದು, ಇದನ್ನು ಸಹಿಸಲಾಗದೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಆತ್ಮಹತ್ಯೆಗೆ ಶರಣಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಸ್ಥಳೀಯರ ವಿವರದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.