– ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ: ರಾಜ್ಯ ಸರ್ಕಾರದ ಗ್ಯಾರಂಟಿ ಘೋಷಣೆಯಂತೆ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಿದ ಪರಿಣಾಮ ಖಾಸಗಿ ಟಂಟಂ ಹಾಗೂ – ಟ್ಯಾಕ್ಸಿಗಳ ಮಾಲೀಕರ ಮತ್ತು ಚಾಲಕರು ಇಡೀ ದಿನ ಖಾಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು.
ದಿನಂಪ್ರತಿ ಬೆಳಗ್ಗಿನಿಂದ ರಾತ್ರಿಯವರೆಗೆ ಬನಹಟ್ಟಿಯಿಂದ ಮುಧೋಳ, ಮಹಾಲಿಂಗಪೂರ, ರಬಕವಿ, ತೇರದಾಳ ಹಾಗೂ ಜಮಖಂಡಿ ಕಡೆಗಳಿಗೆ ಕೆಲಸಕ್ಕೆಂದು ಬಹುಪಾಲು ಮಹಿಳೆಯರು ಸಂಚಾರಕ್ಕೆ ಹೆಚ್ಚಾಗಿ ಖಾಸಗಿ ಟಂಟಂ, ಆಟೋ, ಟ್ಯಾಕ್ಸಿ ಬಳಸುತ್ತಿದ್ದರು. ಇದೀಗ ಶಕ್ತಿ ಯೋಜನೆ ಜಾರಿಯಾದ ನಂತರ ಎಲ್ಲ ಮಹಿಳೆಯರು ಉಚಿತ ಪ್ರಯಾಣದ ಸರ್ಕಾರಿ ಬಸ್ಗಳನ್ನು ಅವಲಂಬಿಸಿದ್ದು, ದಿನಂಪ್ರತಿ ಬರುವಂತೆ ಬೆಳಗ್ಗಿನಿಂದ ನೂರಾರು ಟಂಟಂ ಹಾಗೂ ರಿಕ್ಷಾಗಳು – ನಿಂತಲ್ಲೇ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.
ಆಟೋ ಚಾಲಕರಿಗೆ ನೇರ ಪರಿಣಾಮ
ದಿನಂಪ್ರತಿ 200ಕ್ಕೂ ಅಧಿಕ ಖಾಸಗಿ ವಾಹನಗಳು ಈ ಪ್ರದೇಶದಲ್ಲಿ ಸಂಚರಿಸುತ್ತವೆ. ಆದರೆ, ಸದ್ಯಕ್ಕೆ 100ಕ್ಕಿಂತ ಕಡಿಮೆ ಟಂಟಂ, ಆಟೋ ಓಡಾಡುತ್ತಿವೆ. ಕೋವಿಡ್ ಕಾಲದಲ್ಲಿ ಆರ್ಥಿಕ ಸಂಕಷ್ಟ ಎದುರಿಸಲಾರದೆ ನಿಲುಗಡೆಯಾದರೆ, ಕೆಲವು ಪೆಟ್ರೋಲ್, ಡೀಸೆಲ್ ಹೆಚ್ಚಳದ ಹೊರೆ ಹೊರಲಾರದೆ ರಸ್ತೆಗೆ ಇಳಿದಿಲ್ಲ. ಇದೀಗ ಸರ್ಕಾರದ ಯೋಜನೆಯಿಂದ ದುಡ್ಡು ಕೊಟ್ಟು ಟಂಟಂಗಳಿಗೆ ಬರುವುದು ದೂರದ ಮಾತು. ಇದರ ನೇರ ಪರಿಣಾಮ ಎದುರಿಸುತ್ತಿರುವ ಚಾಲಕರ ಸಮಸ್ಯೆ ಹೇಳತೀರದು.
ಬೇರೆ ಉದ್ಯೋಗ
ಬರುವ ಅಲ್ಪಸ್ವಲ್ಪ ಆದಾಯದಲ್ಲಿ ಜೀವನ ನಡೆಸಲು ಕಟ್ಟಪಡುತ್ತಿದ್ದ ಟಂಟಂ, ಆಟೋ ಚಾಲಕರು ರಸ್ತೆ ತೆರಿಗೆ, ವಾಹನ ವಿಮೆ ಹೊರೆ ಹೊತ್ತು ಸರ್ಕಾರದ ಗ್ಯಾರಂಟಿ ಯೋಜನೆ ಎದುರು ಹೋರಾಟ ನಡೆಸಿ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದ್ದರೆ, ಕೆಲವರು ಇದರ ಸಹವಾಸವನ್ನೇ ಬಿಟ್ಟು ಅನ್ಯ ಉದ್ಯೋಗಕ್ಕೆ ಮಾಡಬೇಕಾದಲ್ಲಿ ಇವರ ಜೀವನಕ್ಕೂ ಸರ್ಕಾರ ಗ್ಯಾರಂಟಿ ಕೊಡಬೇಕಿದೆ.
ವಾಹನ ನಿಂತಲ್ಲೇ ನಿಂತಿವೆ
ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಸ್ವಾಗತಾರ್ಹ. ಆದರೆ, ನಮ್ಮಂತಹ ಟಂಟಂ, ಆಟೋ ಓಡಿಸುವವರ ಬಗ್ಗೆಯೂ ಯೋಚನೆ ಮಾಡಬೇಕಿತ್ತು. ಇಡೀ ದಿನದಲ್ಲಿ ಸುತ್ತಲಿನ ಪಟ್ಟಣಗಳಿಗೆ ಹೋಗಿ ಬಂದಲ್ಲಿ 200 ರಿಂದ 300 ರೂ.ಗಳವರೆಗೆ ಉಳಿತಾಯವಾದರೆ ಪುಣ್ಯ. ಕೆಲವೊಮ್ಮೆ ಬರಿಗೈಯಲ್ಲಿ ಹೋಗಬೇಕಾಗುತ್ತದೆ. ಸೋಮವಾರದಿಂದ ಮಾತ್ರ ನಿಂತಲ್ಲೇ ವಾಹನಗಳು ನಿಂತಿವೆ. ಸರ್ಕಾರ ನಮ್ಮತ್ತ ಗಮನಹಿಸಬೇಕು ಎನ್ನುತ್ತಾರೆ ಬನಹಟ್ಟಿಯ ಆಟೋ ಚಾಲಕ ವಿಷ್ಣು ಪುಕಾಳೆ.