ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಇಂಧನ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ತಡರಾತ್ರಿ ಬಂಧಿಸಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಇದು ಕೇಂದ್ರ ಸರ್ಕಾರದ ರಾಜಕೀಯ ಕಿರುಕುಳ ಮತ್ತು ಸೇಡಿನ ಹೊರತು ಬೇರೇನೂ ಅಲ್ಲ ಎಂದರು.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, “ತಮಿಳುನಾಡು ಇಂಧನ ಸಚಿವ ಶ್ರೀ ವಿ.ಸೆಂಥಿಲ್ ಬಾಲಾಜಿ ಅವರನ್ನು ಇಡಿ ತಡರಾತ್ರಿ ಬಂಧಿಸಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಖಂಡಿಸಿದ್ದಾರೆ. ಇದು ಮೋದಿ ಸರ್ಕಾರವು ವಿರೋಧಿಸುವವರ ವಿರುದ್ಧ ರಾಜಕೀಯ ಕಿರುಕುಳ ಮತ್ತು ಸೇಡಿನ ಕ್ರಮವಲ್ಲದೆ ಬೇರೇನೂ ಅಲ್ಲ. ಇಂತಹ ನಿರ್ಲಜ್ಜ ನಡೆಗಳಿಂದ ಪ್ರತಿಪಕ್ಷಗಳು ಬೆದರುತ್ತವೆ ಎಂದುಕೊಂಡರೆ, ಅದು ನಿಮ್ಮ ಭ್ರಮೆ” ಎಂದು ಕಾಂಗ್ರೆಸ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಬುಧವಾರ ಮುಂಜಾನೆ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇಡಿ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಳ್ಳುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆಸ್ಪತ್ರೆಯ ಹೊರಗೆ ಭಾರೀ ನಾಟಕವಾಡುತ್ತಿದ್ದಾಗ ಇಡಿ ಬಿಗಿ ಭದ್ರತೆಯ ನಡುವೆ ವೈದ್ಯಕೀಯ ಪರೀಕ್ಷೆಗಾಗಿ ಬಾಲಾಜಿಯನ್ನು ಚೆನ್ನೈನ ಒಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ಕರೆತಂದಿತು.
ಇಡಿ ಕ್ರಮದ ವಿರುದ್ಧ ಪ್ರತಿಭಟಿಸಲು ಅವರ ಬೆಂಬಲಿಗರು ಜಮಾಯಿಸಿದಾಗ ಬಾಲಾಜಿ ಕಾರಿನಲ್ಲಿ ಮಲಗಿ ಅಳುತ್ತಿರುವುದು ಕಂಡುಬಂತು.