ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಾಗ್ಗೆ ವಿವಾದಕ್ಕೊಳಗಾಗುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸುಳ್ಳು ದೂರು ಸಲ್ಲಿಸಿ ವಂಚನೆ ಮಾಡಿದ ಆರೋಪದ ಮೇಲೆ ಅವರ ವಿರುದ್ಧ ಕೇಸ್ ದಾಖಲಾಗಿದೆ.
ಉದ್ಯಮಿ ದೇವನಾಥ್ ಎಂಬವರು ನೀಡಿದ್ದ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. 2017ರ ಜುಲೈನಲ್ಲಿ ಸಂಬರಗಿಯಿಂದ ಸಾಲ ಪಡೆದಿದ್ದ ದೇವನಾಥ್, ಅದಕ್ಕೆ ಭದ್ರತೆಯಾಗಿ ಮನೆಯ ಅಸಲಿ ದಾಖಲೆ, ಖಾಲಿ ಚೆಕ್ ಕೂಡ ನೀಡಿದ್ದರು. 2017ರ ಡಿಸೆಂಬರ್ನಲ್ಲೇ ಅಷ್ಟೂ ಹಣವನ್ನು ಹಿಂದಿರುಗಿಸಿದ್ದರು.
ಆದರೆ ಹೆಚ್ಚಿನ ಬಡ್ಡಿ ಹಣ ನೀಡಬೇಕೆಂದು ಮನೆ ದಾಖಲೆ ನೀಡದೆ ಸತಾಯಿಸಿದ್ದ ಸಂಬರಗಿ, ವಿವಿಧ ಪೊಲೀಸ್ ಠಾಣೆಗಳಲ್ಲಿ ದೇವನಾಥ್ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಿದ್ದರು. ಈ ಕುರಿತು ದೇವನಾಥ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಶಾಂತ್ ಸಂಬರಗಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.