ಹೊಸದಿಗಂತ ಡಿಜಿಟಲ್ ಡೆಸ್ಕ್:
ಈತ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಓದಿದ್ದಾರೆ. ಸೂಕ್ತ ಕೆಲಸ ಸಿಗದ ಕಾರಣ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಸೇರಿಕೊಂಡು ಆತನ ಕಷ್ಟಕ್ಕೆ ಜನ ಕಣ್ಣೀರು ಹಾಕಿದ್ದಾರೆ. ಊಟ-ತಿಂಡಿಯಿಲ್ಲದೆ ಆತನ ಪರದಾಟ ನೋಡಿ ಮರುಗದವರೇ ಇಲ್ಲ. ಕೊನೆಗೂ ಸೋಷಿಯಲ್ ಮೀಡಿಯಾ ಪುಣ್ಯ ಎಂಬಂತೆ ಈಗ ಒಳ್ಳೆಯ ಕೆಲಸ ಸಿಕ್ಕಿದ್ದು ಸಂತೋಷಪಡುವ ಸಂಗತಿ.
ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್ ಸಾಹಿಲ್ ಸಿಂಗ್ ಎಂಜಿನಿಯರಿಂಗ್ ಓದಿದ್ದರು. ಕೆಲವು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೂ ಕರೋನಾ ಸಮಯದಲ್ಲಿ ಕೆಲಸ ಕಳೆದುಕೊಂಡರು. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ, ಲಿಂಕ್ಡ್ಇನ್ ಬಳಕೆದಾರ ಪ್ರಿಯಾಂಶಿ ಚಾಂಡೆಲ್ ಸ್ವಿಗ್ಗಿ ಆರ್ಡರ್ ಮಾಡಿದ್ದರು. ಊಟ ಬರೋದಕ್ಕೆ 30 ರಿಂದ 40 ನಿಮಿಷಗಳ ತಡವಾಗಿದೆ. ಗಮ್ಯಸ್ಥಾನದ ವಿಳಾಸ ತಲುಪಿದ ನಂತರ, ಡೆಲಿವರಿ ಬಾಯ್ ಪ್ಲಾಟ್ನ ಹೊರಗೆ ಕುಸಿದು ಬಿದ್ದಿದ್ದಾರೆ. ಇಷ್ಟು ವಿಳಂಬಕ್ಕೆ ಕಾರಣವೇನು ಎಂದು ಪ್ರಿಯಾಂಶಿ ಚಾಂಡೆಲ್ ಪ್ರಶ್ನಿಸಿದ್ದು, ಆತನ ವಿವರಣೆ ಕೇಳಿ ಅವರೂ ಕೂಡ ಕರಗಿ ಹೋಗಿದ್ದಾರೆ.
ಆಹಾರ ವಿತರಿಸಲು ತಮ್ಮ ಬಳಿ ವಾಹನವಿಲ್ಲ, ಹಾಗಾಗಿ ಆರ್ಡರ್ ನೀಡಲು 3 ಕಿ.ಮೀ ನಡೆಯಬೇಕಿತ್ತು ಎಂದು ಸಾಹಿಲ್ ಸಿಂಗ್ ಹೇಳಿದ್ದಾರೆ. ಇ-ಬೈಕ್ ಬಾಡಿಗೆ ಕಟ್ಟುವ ಸ್ಥಿತಿಯಲ್ಲಿಲ್ಲ, ಒಂದು ವಾರದಿಂದ ಊಟ ಮಾಡದೆ, ಚಹಾ ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ತಕ್ಷಣ, ಪ್ರಿಯಾಂಶಿ ಅವರ ಓದಿನ ಹಿನ್ನೆಲೆ ತಿಳಿದು ಅಂಕ ಪಟ್ಟಿ, ಕಾಲೇಜು ಪ್ರಮಾಣಪತ್ರ, ಗುರುತಿನ ಚೀಟಿಗಳನ್ನು ಲಿಂಕ್ಡ್ಇನ್ನಲ್ಲಿ ಹಂಚಿಕೊಂಡಿದ್ದಾರೆ, “ಆಫೀಸ್ ಬಾಯ್, ಅಡ್ಮಿನ್ ಕೆಲಸ, ಗ್ರಾಹಕ ಬೆಂಬಲ ಇತ್ಯಾದಿಗಳಿಗೆ ಯಾವುದೇ ಓಪೆನಿಂಗ್ಸ್ ಇದೆಯಾ ಎಂದು ಪ್ರಶ್ನಿಸಿದ್ದರು” ಅವರ ಈ ಕಥೆ ವೈರಲ್ ಆಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಸಾಹಿಲ್ ಕಥೆಯನ್ನು ಕೇಳಿದ ಅನೇಕರು ಅವರನ್ನು ಬೆಂಬಲಿಸಿದರು. ಸಾಹಿಲ್ ಸಿಂಗ್ ಗೆ ಈಗ ಒಳ್ಳೆಯ ಕೆಲಸ ಸಿಕ್ಕಿದ್ದು, ಉತ್ತಮ ಜೀವನ ನಡೆಸುತ್ತಿದ್ದಾರಂತೆ.