ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿದ ಅಮಲಿನಲ್ಲಿ ಮಗನೇ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರದಲ್ಲಿ ನಡೆದಿದೆ.
ಗಂಗಾರಾಜು (55) ಮೃತ ದುರ್ದೈವಿ. ಚೇತನ್ (28) ಹತ್ಯೆ ಮಾಡಿದ ಪಾಪಿ ಮಗನಾಗಿದ್ದಾನೆ.
ಜೂ.14ರ ಮಧ್ಯರಾತ್ರಿ ಕ್ಷುಲಕ ಕಾರಣಕ್ಕೆ ತಂದೆ- ಮಗನ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ತಂದೆಯ ಕೊಲೆಯಲ್ಲಿ ಜಗಳ ಅಂತ್ಯ ಕಂಡಿದೆ. ಮಗ ಚೇತನ್ ಕುಡಿದ ನಶೆಯಲ್ಲಿ ತಂದೆ ತಲೆಯ ಮೇಲೆ ಒರಳು ಕಲ್ಲು ಎತ್ತಿಹಾಕಿದ್ದಾನೆ. ಬಳಿಕ ತಾನೇ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದು, ಈ ವೇಳೆ ವೈದ್ಯರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಇದನ್ನು ಕೇಳಿದ ಕೂಡಲೇ ಚೇತನ್ಗೆ ಏರಿದ ನಶೆಯು ಇಳಿದಿತ್ತು. ಬಳಿಕ ಆಸ್ಪತ್ರೆಯಿಂದ ಮೃತದೇಹವನ್ನು ನೇರವಾಗಿ ಮನೆಗೆ ತಂದಿದ್ದಾನೆ. ಈ ನಡುವೆ ಮನೆ ಮೇಲಿಂದ ಆಯಾ ತಪ್ಪಿ ಬಿದ್ದಿದ್ದಾರೆಂದು ಬಿಂಬಿಸಲು ಯತ್ನಿಸಿದ್ದಾನೆ. ಮಾತ್ರವಲ್ಲದೆ ನನ್ನ ತಂದೆಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಅಕ್ಕಪಕ್ಕದವರನ್ನೇ ಕೇಳುತ್ತಿದ್ದ ಎನ್ನಲಾಗಿದೆ.
ಸದ್ಯ ಪ್ರಕರಣದಲ್ಲಿ ಕೆಲವು ಅನುಮಾನಗಳು ಮೂಡಿದೆ. ಆರೋಪಿ ಚೇತನ್ ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಗಡಿ ರೋಡ್ ಪೊಲೀಸರು ಹಾಗೂ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಚೇತನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.