ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುರುವಾರ ತಡರಾತ್ರಿ ಇಂಫಾಲ್ನ ಕೊಂಗ್ಬಾದಲ್ಲಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆರ್ಕೆ ರಂಜನ್ ಸಿಂಗ್ ಅವರ ನಿವಾಸಕ್ಕೆ ಗುಂಪೊಂದು ಬೆಂಕಿ ಹಚ್ಚಿದೆ ಎಂದು ಮಣಿಪುರ ಸರ್ಕಾರ ಖಚಿತಪಡಿಸಿದೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಮಾತನಾಡಿದ ಸಿಂಗ್, “ನಾನು ಪ್ರಸ್ತುತ ಅಧಿಕೃತ ಕೆಲಸಕ್ಕಾಗಿ ಕೇರಳದಲ್ಲಿದ್ದೇನೆ. ಅದೃಷ್ಟವಶಾತ್, ನಿನ್ನೆ ರಾತ್ರಿ ನನ್ನ ಇಂಫಾಲ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಹಾನಿ ಉಂಟಾಗಿಲ್ಲ. ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ಗಳೊಂದಿಗೆ ಬಂದಿದ್ದಾರೆ ಮತ್ತು ನನ್ನ ಮನೆಯ ನೆಲ ಮಹಡಿ ಮತ್ತು ಮೊದಲ ಮಹಡಿಗೆ ಹಾನಿಯಾಗಿದೆ” ಎಂದು ತಿಳಿಸಿದರು.
ಈಶಾನ್ಯ ರಾಜ್ಯದಲ್ಲಿ ಶಾಂತಿಗಾಗಿ ಮನವಿ ಮಾಡಿದ ಅವರು, “ನನ್ನ ತವರು ರಾಜ್ಯದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುವುದು ತುಂಬಾ ದುಃಖಕರವಾಗಿದೆ. ನಾನು ಶಾಂತಿಗಾಗಿ ಮನವಿ ಮಾಡುವುದನ್ನು ಮುಂದುವರಿಸುತ್ತೇನೆ. ಈ ರೀತಿಯ ಹಿಂಸಾಚಾರದಲ್ಲಿ ತೊಡಗುವವರು ಸಂಪೂರ್ಣವಾಗಿ ಅಮಾನವೀಯರು” ಎಂದರು.
ಕೆಲವು ತಿಂಗಳಿಂದ ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಅಮಿತ್ ಶಾ ನಾಲ್ಕು ದಿನಗಳ ಕಾಲ ಮಣಿಪುರದಲ್ಲಿ ಮೊಕ್ಕಾಂ ಹೂಡಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದ್ದರೂ ಕೂಡ ಮತ್ತೆ ಮತ್ತೆ ಹಿಂಸಾಚಾರಗಳು ನಡೆಯುತ್ತಿವೆ.