ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕೆಗಳೆಲ್ಲಾ ಏನು ಮಾಡಬೇಕು? ನಮ್ಮ ರಾಜ್ಯ ಬಿಟ್ಟು ಬೇರೆಡೆ ಹೋಗೋದಕ್ಕೆ ಕಾರ್ಖಾನೆಗಳು ತಯಾರಿ ಮಾಡಿಕೊಳ್ಳುತ್ತಿವೆ. 10 ರೂಪಾಯಿ ಕೊಟ್ಟು 20 ರೂಪಾಯಿ ಕಿತ್ಕೊಂಡು ಫ್ರೀಯಾಗಿ ಕೊಟ್ಟೆ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಿರೋದು ಸಿದ್ದು ಸರ್ಕಾರ ಎಂದು ಮಾಜಿ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಎಲ್ಲಾರ್ಗೂ ಫ್ರೀ ಫ್ರೀ ಎಂದು ಹೇಳಿಕೊಂಡಿದ್ದ ಸರ್ಕಾರ ಇದೀಗ ಕಂಡೀಷನ್ ಅಪ್ಲೇ ಅನ್ನೋ ಮಾತು ಆಡುತ್ತಿದೆ. ವಿದ್ಯುತ್ ದರ ಹೆಚ್ಚಳ ಒಂದು ಕಳ್ಳಾಟ. 70 ಪೈಸೆ ಹೆಚ್ಚಿಸಿದ್ದಾರೆ. ಬೇಕಾದುದೆಲ್ಲ ಕಾಂಗ್ರೆಸ್ ಪಕ್ಷದ್ದು. ಬೇಡದ್ದೆಲ್ಲವೂ ಬಿಜೆಪಿಯದು ಎಂದು ತಿಳಿಸಿದರು.
ಕೇಂದ್ರ ಎಂದರೆ ಅತ್ತೆ ಮನೆಯೇ?
ಕೇಂದ್ರವು ಅಕ್ಕಿ ವಿಚಾರದಲ್ಲಿ ಸಮಸ್ಯೆ ತಂದೊಡ್ಡಿದೆ ಎಂದರೆ, ಕೇಳಿದೊಡನೆ ಕೊಡಲು ಕೇಂದ್ರ ಎಂದರೆ ಅತ್ತೆ ಮನೆಯೇ? ಘೋಷಿಸುವ ಮೊದಲೇ ನಿಮಗೆ ಜ್ಞಾನ, ಪ್ರಜ್ಞೆ ಇರಲಿಲ್ಲವೇ? ನಾಳೆ ಕರ್ನಾಟಕವನ್ನು ಮಾರಾಟ ಮಾಡುತ್ತೇವೆ ಎಂದರೆ ಕೇಂದ್ರ ಎಸ್ ಎನ್ನಬೇಕೇ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ‘ಊಟಕ್ಕೆ ಕೂತರೆ ನಂದೂ ನಂದೇ; ನಿನ್ನದೂ ನಂದೇ’ ಎಂಬಂತಾಗಿದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ 1 ಲಕ್ಷದ 10 ಸಾವಿರ ಕೋಟಿ ಹಣ ಬೇಕು. ರಾಜ್ಯ ಇನ್ನೊಂದು ವರ್ಷದಲ್ಲಿ ದಿವಾಳಿ ಆಗಲಿದೆ. ಕಾನೂನನ್ನು ಎಲ್ಲರೂ ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಅಂಗನವಾಡಿ, ಸಣ್ಣ ಕೈಗಾರಿಕೆ, ಸ್ತ್ರೀಶಕ್ತಿ ಸಂಘಗಳ ಗಲಾಟೆ ಮುಂದುವರೆಯುವಂತಾಗಿದೆ. ಇದು ಕಾಂಗ್ರೆಸ್ ಪಕ್ಷದ ಅಜಾಗರೂಕತೆಯ ಸೃಷ್ಟಿ ಎಂದು ಟೀಕಿಸಿದರು.
ಮೋಸಗಾರರು ಯಾರು?
ವಿದ್ಯುತ್ ದರದ ವಿಚಾರದಲ್ಲಿ ಮೋಸಗಾರರು ಯಾರು? ಕಳೆದ ಬಾರಿ ಮತ್ತು ಈ ಬಾರಿಯ ಬಿಲ್ಲನ್ನು ಸೋಷಿಯಲ್ ಮೀಡಿಯಕ್ಕೆ ಹಾಕಿ ಎಂದು ಮನವಿ ಮಾಡಿದರು. ಕೊಟ್ಟಂಗೆ ತೋರಿಸಿ ಎಲ್ಲ ಕಿತ್ಕೊಳೋದು ಎಂಬ ದುಸ್ಥಿತಿ ಕಾಂಗ್ರೆಸ್‍ನವರದು ಎಂದು ಆಕ್ಷೇಪಿಸಿದರು.
ಕಾಂಗ್ರೆಸ್‌ನವರೇ ಒಪ್ತಾ ಇಲ್ಲ
ಕಾಂಗ್ರೆಸ್ ಪಕ್ಷದ ತನ್ವೀರ್ ಸೇಠ್, ಶ್ಯಾಮನೂರು ಶಿವಶಂಕರಪ್ಪ ಅವರೇ ಕಾಂಗ್ರೆಸ್ ಸರಕಾರದ ನೀತಿಯನ್ನು ಪ್ರಶ್ನೆ ಮಾಡುವಂತಾಗಿದೆ. ಜನರ ಗಮನ ಬೇರೆಡೆ ಸೆಳೆಯಲು ಈ ಕ್ಯಾಬಿನೆಟ್ ನಿರ್ಧಾರ ಮಾಡಿದ್ದಾರೆ. ಇವುಗಳ ವಿರುದ್ಧ ವಿಧಾನಸಭೆ ಹೊರಗೆ ಮತ್ತು ಒಳಗಡೆ ಪ್ರತಿಭಟಿಸುತ್ತೇವೆ ಎಂದು ತಿಳಿಸಿದರು.