Thursday, December 18, 2025

ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಕೋಣ, 4 ಎಮ್ಮೆಗಳು ಪೊಲೀಸರ ವಶಕ್ಕೆ

ಹೊಸದಿಗಂತ ವರದಿ ಆಲೂರು:

ಆಲೂರು ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಬೆಳಗಿನ ಜಾವ 3:30ಕ್ಕೆ ಆಲೂರು ತಾಲೂಕು ನಿಡನೂರು ಕ್ರಾಸ್ ಬಳಿ ಮಂಗಳೂರು ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ 1 ಕೋಣ, 4 ಎಮ್ಮೆಗಳನ್ನು ಒಳಗೊಂಡ ಐದು ಜಾನುವಾರಗಳನ್ನು ತುಂಬಿದ್ದ ಬೊಲೆರೋ ಪಿಕಪ್ ವಾಹನ ಸಹಿತ ಜಾನುವಾರಗಳನ್ನು ಆಲೂರು ಪೊಲೀಸರು ವಶಕ್ಕೆ ಪಡೆಡಿದ್ದಾರೆ.

ಆಲೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮೋಹನ್ ರೆಡ್ಡಿ ತನ್ನ ಸಿಬ್ಬಂದಿಯೊಂದಿಗೆ ಡಿ. 16 ರಂದು ರಾತ್ರಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಡಿಸೆಂಬರ್ 17 ರ ಬೆಳಗಿನ ಜಾವ 3:30 ರ ಸಮಯದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನಿಡನೂರು ಕ್ರಾಸ್ ಬಳಿ ಕೆ.ಎಲ್-05 ಎ.ವೈ 4539 ವಾಹನ ನೋಂದಣಿ ಸಂಖ್ಯೆಯ ಬದಲಿಗೆ ಕೆ.ಎ-25 ಎ.ಬಿ 4033 ಎಂದು ನಂಬರ್ ಪ್ಲೇಟ್ ಅನ್ನು ಬದಲಾಯಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ಬೊಲೆರೋ ಪಿಕಪ್ ವಾಹನದಲ್ಲಿ 5 ಜಾನುವಾರುಗಳನ್ನು ಅಕ್ರಮವಾಗಿ ಹಾಸನದ ಮಂಗಳವಾರ ಸಂತೆಯಲ್ಲಿ ಖರೀದಿಸಿ ಕಾಸರಗೋಡಿನ ಖಾಸಾಯಿಖಾನೆಗೆ ಸಾಗಿಸುತ್ತಿತ್ತು.

ಮಾರ್ಗ ಮಧ್ಯದಲ್ಲಿ ರಾತ್ರಿ ಗಸ್ತಿನಲ್ಲಿದ್ದ ವೃತ್ತ ನಿರೀಕ್ಷಕರು ಬೊಲೆರೋ ಪಿಕಪ್ ವಾಹನ ಸೇರಿದಂತೆ ಅದರಲ್ಲಿದ್ದ ಆರೋಪಿಗಳಾದ ಕೇರಳ ಮೂಲದ ಕಾಸರಗೋಡಿನ ರಾಜನ್ ವರ್ಗಿಸ್ ಡ್ರೈವರ್ ಕೆಲಸ,ಇದೇ ಕಾಸರಗೋಡಿನ ಪಿ.ಟಿ ಸಂತೋಷ್ ಕೇರಳ ಮೂಲದ ದನದ ವ್ಯಾಪಾರಿ, ಹಾಗೂ ಕಾರ್ಯಾಚರಣೆಯ ವೇಳೆ ತಪ್ಪಿಸಿಕೊಂಡು ಓಡಿ ಹೋಗಿರುವ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದ ಮೇಘರಾಜ್ ಎಂಬುವರ ಮೇಲೆ ಭಾರತೀಯ ನ್ಯಾಯ ಸಂಹಿತ (ಬಿ.ಎನ್.ಎಸ್) ಪ್ರಕಾರ ಗೋಹತ್ಯೆ ನಿಷೇಧ ಕಾಯ್ದೆ 2020 ರಂತೆ ಪ್ರಕರಣ ದಾಖಲಿಸಲಾಗಿದೆ.

ಆಲೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು ಮೋಹನ್ ರೆಡ್ಡಿ ರಾತ್ರಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ವಾಹನಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಈ ಬೊಲೆರೋ ಪಿಕಪ್ ವಾಹನವನ್ನು ಅನುಮಾನದ ಮೇಲೆ ತಡೆದು ಪರಿಶೀಲನೆ ಮಾಡಿದಾಗ ಈ ವಾಹನದಲ್ಲಿ 5 ಜಾನುವಾರುಗಳು ಇರುವುದು ಕಂಡುಬಂದಿತ್ತು ಇದರ ಪೂರ್ವಪರವನ್ನು ವಿಚಾರಿಸಲಾಗಿ ಈ ಜಾನುವಾರಗಳನ್ನು ಕಾಸರಗೋಡಿನ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂಬ ವರದಿ ಆಧಾರದ ಮೇಲೆ ಕಾನೂನು ಕ್ರಮವನ್ನು ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.

error: Content is protected !!