ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯದ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅವರ ವಿವಾಹ ಬೀಗರ ಔತಣ ಕೂಟ ಭರ್ಜರಿಯಾಗಿ ನಡೆದಿದ್ದು, ಈ ವೇಳೆ ಸಹಸ್ರಾರು ಮಂದಿ ಪಾಲ್ಗೊಂಡು ಭೋಜನ ಸವಿದಿದ್ದಾರೆ.
ಇತ್ತ ಊಟಕ್ಕೆ ನೂಕು ನುಗ್ಗಲು ಉಂಟಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ತಡೆದ ಪ್ರಸಂಗ ನಡೆದಿದೆ.
ಸುಮಾರು 15 ಎಕರೆ ವಿಶಾಲ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಸ್ಯಾಹಾರಿ ಮತ್ತು ಮಾಂಸಹಾರಿ ಭೋಜನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗೆ ಸುಮಾರು 11.15ಕ್ಕೆ ನವ ದಂಪತಿಗಳಾದ ಅಭಿಷೇಕ್ ಹಾಗೂ ಅವಿವಾ ಆಗಮಿಸಿದರು. ಬಳಿಕ ವೇದಿಕೆ ಏರಿ ಅಭಿಮಾನಿಗಳಿಗೆ ಹಸ್ತಲಾಘವ ಮಾಡಿದರು. ನಂತರ ಊಟದ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಊಟದ ವ್ಯವಸ್ಥೆ ಮಾಡುವ ಸಂದರ್ಭದಲ್ಲಿ ಮಾಂಸದೂಟಕ್ಕೆ ನೂಕು ನುಗ್ಗಲು ಉಂಟಾಯಿತು.
ಈ ವೇಳೆ ಪೊಲೀಸರು ಅಭಿಮಾನಿಗಳನ್ನು ತಡೆಯುತ್ತಿದ್ದಂತೆ ಮಹಿಳೆಯರು ಮತ್ತು ಅಂಬರೀಶ್ ಅಭಿಮಾನಿಗಳು ರೊಚ್ಚಿಗೆದ್ದು ಟೆಂಟನ್ನು ಹರಿದುಹಾಕಿ, ಕಿತ್ತೆಸೆದು ಒಳ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದಾಗಿ ಸುಮಾರು 30ಕ್ಕೂ ಹೆಚ್ಚು ಮಂದಿ ಮಹಿಳೆಯರು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ.