ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಖಡಕ್ ತಿರುಗೇಟು ನೀಡಿದ್ದಾರೆ.
ನಿಮಗೆ ತಾಕತ್ತಿದ್ದರೆ ನಮ್ಮನ್ನು ಮುಟ್ಟಿ ನೋಡಿ ಎನ್ನುವ ಮೂಲಕ ಬಿಜೆಪಿ ವಿರುದ್ಧ ಮಾತನಾಡಿದ ಎಂ. ಕೆ. ಸ್ಟಾಲಿನ್ ಗೆ ಇಂದು ಸಾರ್ವಜನಿಕರ ಸಭೆಯಲ್ಲಿ ಅಣ್ಣಾಮಲೈ, ಧೈರ್ಯವಿದ್ದರೆ ನಮ್ಮಲ್ಲಿ ಒಬ್ಬರನ್ನು ಟಚ್ ಮಾಡಿ ನೋಡಿ.. ನೀವೇನು ಕೊಟ್ಟಿದ್ದೀರೋ ಅದು ನಿಮಗೆ ವಾಪಸ್ ಆಗುತ್ತದೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸಹೋದರಿ ಕನ್ನಿಮೋಳಿ ಅವರನ್ನು ಬಂಧಿಸಿದ್ದಾಗಲೂ ಸ್ಟಾಲಿನ್ ಅವರ ಮುಖದಲ್ಲಿ ಇಷ್ಟೊಂದು ಕೋಪ ಕಂಡಿರಲಿಲ್ಲ. ಇಡಿಯಿಂದ ಬಂಧನವಾಗಿರುವ ಸಚಿವ ಸೆಂಥಿಲ್ ಬಾಲಾಜಿ ಡಿಎಂಕೆ ಪಕ್ಷದ ಖಜಾನೆ ಎಂದು ಜನರು ಹೇಳುತ್ತಿದ್ದಾರೆ. ತನ್ನ ಬೆದರಿಕೆ ಹೇಳಿಕೆಗಳ ಮೂಲಕ ಸ್ಟಾಲಿನ್ ಅವರು ಎಲ್ಲ ಮಿತಿಗಳನ್ನು ಮೀರಿದ್ದಾರೆ.ನಿಮ್ಮ ಬೆದರಿಕೆಗಳಿಗೆ ನಾವು ಭಯಬೀತರಾಗುತ್ತೇವೆ ಅಂತ ನೀವು ಅಂದುಕೊಂಡಿದ್ದೀರಾ? ನಿಮಗೆ ತಾಕತ್ತಿದ್ದರೆ ನಮ್ಮಲ್ಲಿ ಯಾರಾದರೂ ಒಬ್ಬರನ್ನು ಮುಟ್ಟುವ ಪ್ರಯತ್ನ ಮಾಡಿ. ನೀವು ಏನು ಕೊಡುತ್ತೀರೋ ಅದನ್ನು ಮರಳಿ ಪಡೆಯುತ್ತೀರಿ ಎಂದು ಸವಾಲು ಹಾಕಿದ್ದಾರೆ.
ಸ್ಟಾಲಿನ್ ಹೇಳಿದ್ದೇನು?
ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಇಡಿ (ED) ಅಧಿಕಾರಿಗಳು ಸ್ಟಾಲಿನ್ ಸರಕಾರದ ಅಬಕಾರಿ ಸಚಿವ ಸೇಂಥಿಲ್ ಅವರನ್ನು ಬಂಧಿಸಿದ್ದು, ಇದ್ರ ಬಳಿಕ ಸ್ಟಾಲಿನ್ ವೀಡಿಯೋವೊಂದನ್ನು ಬಿಡುಗಡೆ ಮಾಡಿ ಬಿಜೆಪಿಗೆ ಸವಾಲೆಸೆದಿದ್ದರು. ಡಿಎಂಕೆಯಿಂದ ಪ್ರತಿಯಾಗಿ ಬರುವ ಯಾವುದೇ ರೀತಿಯ ಪ್ರತೀಕಾರವನ್ನು ಬಿಜೆಪಿಗೆ ನಿಭಾಯಿಸಲು ತುಂಬಾ ಕಷ್ಟವಾಗಬಹುದು. ಸೇಡು ತೀರಿಸಿಕೊಳ್ಳಲು ಕೇಂದ್ರದ ಏಜೆನ್ಸಿಗಳನ್ನು ನಿಯೋಜಿಸುವ ಬದಲು ಮುಖಾಮುಖಿ ಬರುವಂತೆ ಸವಾಲು ಹಾಕಿದ್ದರು. ಇದು ಬೆದರಿಕೆಯಲ್ಲ ಬದಲಿಗೆ ಇದು ಎಚ್ಚರಿಕೆ ಎಂದಿದ್ದರು.