ಹೊಸದಿಗಂತ ವರದಿ, ಅಂಕೋಲಾ:
ಪಟ್ಟಣಗಳು ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತು ಜನಸಾಮಾನ್ಯರಿಗೆ ನೆರಳು ನೀಡುತ್ತಿರುವ ಮರಗಳನ್ನು ಯಾವುದೇ ಮುಲಾಜಿಲ್ಲದೇ ಸಂಪೂರ್ಣವಾಗಿ ಕಡಿದು ಬಿಸಾಡುವುದು ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ ಇಂಥ ಘಟನೆಯೊಂದರಲ್ಲಿ ಪಟ್ಟಣದ ಕೆ.ಎಲ್. ಇ ರಸ್ತೆಯಲ್ಲಿ ಇರುವ ಬೃಹತ್ ಮರವನ್ನು ಅರಣ್ಯ ಇಲಾಖೆ ಕಡಿಯಲು ಹೊರಟ ಸಂದರ್ಭದಲ್ಲಿ ಸಾರ್ವಜನಿಕರೇ ಪ್ರತಿಭಟಿಸಿ ಮರವನ್ನು ಉಳಿಸಿಕೊಳ್ಳುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ಪುರಸಭೆ ಕಾರ್ಯಾಲಯದ ಎದುರು ಇರುವ ಮರದ ಪಕ್ಕದಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವ ಕಾರಣ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಿರ್ವಹಣಾ ಕೆಲಸದ ಸಂದರ್ಭದಲ್ಲಿ ಮರ ತೆರುವುಗೊಳಿಸಲು ಹೆಸ್ಕಾಂ ವತಿಯಿಂದ ಅರಣ್ಯ ಇಲಾಖೆಗೆ ಮನವಿ ನೀಡಲಾಗಿತ್ತು.
ಮನವಿಯ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮರ ಕತ್ತರಿಸಲು ಬಂದ ಸಂದರ್ಭದಲ್ಲಿ ಸ್ಥಳೀಯರು ಸಂಪೂರ್ಣ ಮರ ಕತ್ತರಿಸಲು ವಿರೋಧ ವ್ಯಕ್ತಪಡಿಸಿ ವಿದ್ಯುತ್ ತಂತಿ ಹಾದು ಹೋಗಿರುವ ಪಕ್ಕದ ರಂಬೆಗಳನ್ನು ಮಾತ್ರ ಕತ್ತರಿಸುವಂತೆ ತಿಳಿಸಿದರು.
ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಮರದ ಸುತ್ತ ಮಾನವ ಸರಪಣಿ ನಿರ್ಮಿಸುವ ಮೂಲಕ ಮರ ಕಡಿಯದಂತೆ ಒತ್ತಾಯಿಸಿ ಹಲವಾರು ವರ್ಷಗಳಿಂದ ನೆರಳು ನೀಡುತ್ತ ಬಂದಿರುವ ಮರಗಳನ್ನು ಕಡಿಯದಂತೆ ಮನವಿ ಮಾಡುವ ಮೂಲಕ ಮರದ ಬುಡಕ್ಕೆ ಕೊಡಲಿಯೇಟು ಬೀಳುವುದನ್ನು ತಡೆದರು.
ಸುರೇಶ ನಾಯ್ಕ, ಪ್ರಭಾಕರ ನಾಯ್ಕ, ಅಜಯ ನಾಯ್ಕ, ಗೋಪಾಲ ನಾಯ್ಕ, ರಾಜೇಶ ನಾಯ್ಕ, ಸಾಗರ ನಾಯ್ಕ ರಾಜು ನಾಯ್ಕ ಮತ್ತು ಸುತ್ತ ಮುತ್ತಲಿನ ಜನರ ಕೆಲಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.