ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೈಗೆಟುಕುವ ಬೆಲೆಗೆ ಏನಾದ್ರೂ ಸಿಗತ್ತೆ ಅಂದ್ರೆ ಯಾರಿಗೆ ತಾನೆ ಹೋಗೋಕೆ ಮನಸಾಗೋದಿಲ್ಲ? ತೆಲಂಗಾಣದಲ್ಲಿ ನೂತನ ಹೊಟೇಲ್ ಒಂದು ಗಮನ ಸೆಳೆಯೋಕ್ಕಾಗಿ ಒಂದು ರೂಪಾಯಿಯ ನೋಟು ತಂದವರಿಗೆ ಒಂದು ಪ್ಲೇಟ್ ಬಿರಿಯಾಗಿ ಎಂದು ಜಾಹೀರಾತು ನೀಡಿದೆ.
ಒಂದು ರೂಪಾಯಿಗೆ ಬಿರಿಯಾನಿ ಸಿಗುವಾಗ ಹೋಗದೇ ಇರೋಕೆ ಸಾಧ್ಯವಾ? ನಾ ಮುಂದು ತಾ ಮುಂದು ಎಂದು ಜನ ಬಿರಿಯಾನಿ ಖರೀದಿಗೆ ಮುಗಿಬಿದ್ದಿದ್ದಾರೆ.
ಇತ್ತ ಹೊಟೇಲ್ನವರು ಜನ ತಮ್ಮ ಜಾಹೀರಾತಿಗೆ ಮೆಚ್ಚಿ ಬರ್ತಾರೋ ಇಲ್ವೋ ಅನ್ನೋ ಡೌಟ್ನಲ್ಲಿಯೇ ಸಾಕಷ್ಟು ಬಿರಿಯಾನಿ ಮಾಡಿ ಇಟ್ಟುಕೊಂಡಿದ್ದಾರೆ. ಆದರೆ ಒಂದು ರೂಪಾಯಿಗೆ ಬಿರಿಯಾನಿ ಕೊಟ್ರೆ ಎಷ್ಟಿದ್ರೂ ಸಾಲೋದಿಲ್ಲ ಅಲ್ವಾ? ಅಲ್ಲದೇ ಒಬ್ಬರಿಗೆ ಒಂದು ಪ್ಲೇಟ್ ಮಾತ್ರ ಕೊಡ್ತೀವಿ ಅನ್ನೋ ಕಂಡೀಷನ್ ಬೇರೆ ಹಾಕಿದ್ದಾರೆ. ಹಾಗಾಗಿ ಆರು ರೂಪಾಯಿ ಇದ್ರೆ ಆರು ಮಂದಿ ಹೊಟೇಲ್ ಮುಂದೆ ಜಮಾಯಿಸಿದ್ದಾರೆ.
ತೆಲಂಗಾಣದ ಕರೀಂ ನಗರದ ಎಂಪೈರ್ ಹೊಟೇಲ್ ಆಫರ್ನಿಂದಾಗಿ ಪೊಲೀಸರು ಹೈರಾಣಾಗಿದ್ದಾರೆ. ಹೊಟೇಲ್ ಮುಂದೆ ನೂಕು ನುಗ್ಗಲು, ಪಾರ್ಕಿಂಗ್ ಸಮಸ್ಯೆ ಹಾಗೂ ಟ್ರಾಫಿಕ್ ಜಾಮ್ನಿಂದ ಜನ ಕಂಗಾಲಾಗಿದ್ದಾರೆ.
ಸಾಲದ್ದಕ್ಕೆ ಇನ್ನು ರಾಶಿ ಜನ ಇರುವಂತೆಯೇ ಬಿರಿಯಾನಿ ಕೂಡ ಖಾಲಿಯಾಗಿದ್ದು, ಬಿರಿಯಾನಿ ಕೊಡದೇ ಹೋಗೋದಿಲ್ಲ ಎಂದು ಜನ ಪಟ್ಟು ಹಿಡಿದು ಪೊಲೀಸರಿಗೆ ತಲೆ ಬಿಸಿಮಾಡಿದ್ದಾರೆ.
ನಂತರ ಪೊಲೀಸರು ಅಂಗಡಿ ಮುಚ್ಚಿಸಿ ಜನರ ಮನವೊಲಿಸಿ ಮನೆಗೆ ಕಳುಹಿಸಿದ್ದಾರೆ. ಇನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿದವರಿಗೆ ನೂರು ರೂಪಾಯಿ ಫೈನ್ ಹಾಕಿಸಿ ಚುರುಕು ಮುಟ್ಟಿಸಿದ್ದಾರೆ. ಒಂದು ರೂಪಾಯಿ ಬಿರಿಯಾನಿಯೂ ಸಿಗದೇ, ನೂರು ರೂಪಾಯಿ ಫೈನ್ ಕೂಡ ಕಟ್ಟಿ ಹೋದವರೇ ಹೆಚ್ಚಿದ್ದಾರೆ!