ಹೊಸದಿಗಂತ ವರದಿ ಬಳ್ಳಾರಿ:
ಕೊಲಾರ ಜಿಲ್ಲೆಯ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಡಾ.ದರ್ಶಿನಿ ಸತ್ಯನಾರಾಯಣ ಸಾವಿಗೆ ಕಾರಣರಾದ ಎಂ.ವಿ.ಜೆ.ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ, ಡಾ.ಮಹೇಶ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಶಿಕ್ಷೆಗೆ ಒಳಪಡಿಸಬೇಕು ಹಾಗೂ ಮೃತಪಟ್ಟ ವಿದ್ಯಾರ್ಥಿನಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಇಲ್ಲಿನ ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದ ಪದಾಧಿಕಾರಿಗಳು, ಯಾದವ ಸಮುದಾಯದ ಸಾವಿರಾರು ಜನರು ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮುನ್ಸಿಪಲ್ ಕಾಲೇಜು ಮೈದಾನದ ಬಳಿ ಜಮಾಯಿಸಿದ ಯಾದವ ಸಮುದಾಯದ ಸಾವಿರಾರು ಜನರು, ಡಾ.ದರ್ಶಿನಿ ಹತ್ಯೆ ಕ್ರಮ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಮುನ್ಸಿಪಲ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ವಿದ್ಯಾರ್ಥಿನಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೊಲ್ಲರ ಸಂಘದ ಜಿಲ್ಲಾ ಸಮೀತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದರು. ಗೊಲ್ಲರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಪಿ.ಗಾದೆಪ್ಪ ಅವರು ಮಾತನಾಡಿ, ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ಡಾ.ದರ್ಶಿನಿ ಸತ್ಯನಾರಾಯಣ ಅವರ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಈ ಘಟನೆ ಇಡೀ ಸಮಾಜವೇ ತಲೆ ತಲೆತಗ್ಗಿಸುವಂತಾಗಿದೆ ನಿರ್ಲಕ್ಷ್ಯ ವಹಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಡಾ.ದರ್ಶಿನಿ ಅವರು ಸ್ನಾತಕೋತ್ತರ ಪದವಿಗೆ ಸರ್ಕಾರಿ ಕೋಟಾದಡಿ ಎಂ.ವಿ.ಜೆ.ಕಾಲೇಜಿನಲ್ಲಿ ಎಂ.ಡಿ.ಪ್ರವೇಶ ಪಡದಿದ್ದು, ಹಿಂದುಳಿದ ಯಾದವ ಸಮುದಾಯಕ್ಕೆ ಸೇರಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿನಿಗೆ ಸರ್ಕಾರಿ ಕೊಟಾದಡಿ ಪ್ರವೇಶ ಪಡೆದಿದ್ದರೂ ಹೆಚ್ಚುವರಿ ಹಣ ಪಡೆಯಲು ದೌರ್ಜನ್ಯ ಮಾಡಿದ್ದಾರೆ. ಈ ಕುರಿತು ಆಡಳಿತ ಮಂಡಳಿಯವರು ವಿದ್ಯಾರ್ಥಿನಿಗೆ ಸಾಕಷ್ಟು ನಾನಾ ರೀತಿಯ ಕಿರುಕುಳ ನೀಡಿದ್ದಾರೆ, ಈ ಹಿನ್ನೆಲೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.