ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕಾರ್ಯಕರ್ತರು, ಮುಖಂಡರ ಸಲಹೆ ಪಡೆಯಬೇಕು. ಯಾರೇ ಸೂಕ್ತ ಅಂತ ಅವರು ತೀರ್ಮಾನ ಮಾಡಿದ್ರೆ ಅವರಿಗೆ ಬೆಂಬಲ ಕೊಡ್ತೀನಿ. ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ. ಹಾಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಅನ್ನೋದು ನನ್ನ ಉದ್ದೇಶವಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಗಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದರು, ಕುಮಾರಸ್ವಾಮಿ ಅವರಿಗೆ ವ್ಯಂಗ್ಯ ಬಿಟ್ಟು ಬೇರೆ ಏನೂ ಬರಲ್ಲ, ವ್ಯಂಗ್ಯ ಮಾಡಲಿ. ಅಧಿಕಾರದ ದಾಹ ಇದ್ದವರಿಗೆ ರಾಜಕಾರಣ ಬೇಕು. ನನಗಿರುವುದು ಅಭಿವೃದ್ಧಿಯ ದಾಹ. ಇನ್ನೂ ಒಂದು ವರ್ಷ ಸಮಯ ಇದೆ. ನಾನು ಅಭಿವೃದ್ಧಿಗೆ ಗಮನ ಕೊಟ್ಟಿದ್ದೀನಿ ಅಂತ ಹೆಚ್‌ಡಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಡಿ.ಕೆ. ಸುರೇಶ್ ಸೋಲಿಸಲು ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಅವರು ಹೊಂದಾಣಿಕೆ ಮಾಡಿಕೊಳ್ಳಲಿ, ಯಾರು ಬೇಕಾದ್ರೂ ನಿಲ್ಲಲಿ. ನನಗಿರೋದು ಒಂದೇ ಮತ, ಪ್ರಧಾನಿಗಿರೋದು ಒಂದೇ ಮತ. ಆ ಮತವನ್ನ ಯಾರಿಗೆ ಹಾಕಬೇಕು ಅಂತ ಜನ ತೀರ್ಮಾನ ಮಾಡ್ತಾರೆ ಅಂತ ಹೇಳಿದರು.
ಆರ್ ಅಶೋಕ್ ಅವರಷ್ಟು ತಿಳುವಳಿಕೆ ನನಗಿಲ್ಲ: ಕಾಂಗ್ರೆಸ್ ಪ್ರತಿಭಟನೆಗೆ ಶಾಮಿಯಾನ ಹಾಕಿಕೊಡ್ತೀವಿ ಎಂಬ ಮಾಜಿ ಸಚಿವ ಆರ್.ಅಶೋಕ್ ಹೇಳಿಕೆ ಬಗ್ಗೆ ಮಾತನಾಡಿದ ಡಿ.ಕೆ. ಸುರೇಶ್ ಅವರು, ಆರ್.ಅಶೋಕ್ ಅವರಷ್ಟು ತಿಳುವಳಿಕೆ ನನಗಿಲ್ಲ. ಅವರು ಶಾಮಿಯಾನ ಹಾಕಿಸಿಕೊಟ್ರೆ ಸಂತೋಷ. ಅಲ್ಲೇ ಕೂತು ನಾವು ಪ್ರತಿಭಟನೆ ಮಾಡ್ತೀವಿ. ಎಲ್ಲಾ ಕಡೆಗಳಲ್ಲೂ ಶಾಮಿಯಾನ ಹಾಕಿಸಿಕೊಡಲಿ ಎಂದು ಹೇಳಿದರು.