ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಯಾಗಿದ್ದ ಕೃಷ್ಣೇಗೌಡ ಅವರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ 23ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ. 2016ರ ಮೇ 11ರಂದು ಕೊತ್ತನೂರು, ಹುಳಿಮಾವು ಬಳಿ ಆಸ್ತಿ ಜಂಟಿ ಖಾತೆ ಮಾಡಿಕೊಡಲು 20,000 ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದರು. ಇದೀಗ ಭ್ರಷ್ಟಾಚಾರ ಸಾಬೀತಾದ ಹಿನ್ನೆಲೆಯಲ್ಲಿ 3 ವರ್ಷ ಕಠಿಣ ಜೈಲು ಶಿಕ್ಷೆ 40 ಸಾವಿರ ರೂ. ದಂಡ ವಿಧಿಸಲಾಗಿದೆ.
ಪ್ರದೀಪ್ ಎಂಬುವರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ ಎಸಿಬಿ ಪೊಲೀಸರು, ಲಂಚ ಸ್ವೀಕರಿಸುತ್ತಿದ್ದ ಕೃಷ್ಣೇಗೌಡರನ್ನು ಬಂಧಿಸಿದ್ದರು. ಕೊತ್ತನೂರು, ಹುಳಿಮಾವು ಬಳಿ ಆಸ್ತಿ ಜಂಟಿ ಖಾತೆ ಮಾಡಿಕೊಡಲು ಕೃಷ್ಣೇಗೌಡ ಅವರು 20 ಸಾವಿರ ರೂ. ಲಂಚ ಕೇಳಿದ್ದರು. ಈ ಸಂಬಂಧ ಪ್ರದೀಪ್ ಎಸಿಬಿಗೆ ದೂರು ನೀಡಿದ್ದರು.
2019-20ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೇ 118 ಕೋಟಿ ರೂಪಾಯಿ ನಕಲಿ ಬಿಲ್ ಸೃಷ್ಟಿಸಿದ ಆರೋಪದ ಮೇಲೆ 11 ಬಿಬಿಎಂಪಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಕಳಪೆ ಕಾಮಗಾರಿ ಸಂಬಂಧ ಲೋಕಾಯುಕ್ತಕ್ಕೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ದೂರು ನೀಡಿದ್ದರು.
ಈ ಹಿನ್ನಲೆ ಬೆಂಗಳೂರಿನ ರಾಜರಾಜೇಶ್ವರಿನಗರ ವಲಯದ 9 ಬಿಬಿಎಂಪಿ ಇಂಜಿನಿಯರ್, ಓರ್ವ ಅಧೀಕ್ಷಕ, ಓರ್ವ ಉಪ ನಿರ್ದೇಶಕ ಸೇರಿದಂತೆ ಒಟ್ಟು 11 ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅಲ್ಲದೇ ಹಗರಣದ ತನಿಖೆಗಾಗಿ ಬೆಂಗಳೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಿಸಿದೆ.