– ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ: ನೀರಿಲ್ಲದೆ ಕಂಗಾಲಾಗಿರುವ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಹೊಸೂರು ಪಟ್ಟಣದ ಸಾವಿರಾರು ಕುಟುಂಬಗಳಿಗೆ ಧರೆಪ್ಪ ಉಳ್ಳಾಗಡ್ಡಿಯವರು ಸ್ವಂತ ಬಾವಿಯಿಂದ ನೀರು ಪೂರೈಸುವ ಮೂಲಕ ಮಾದರಿಯಾಗಿದ್ದಾರೆ.
ಎಲ್ಲೆಡೆ ಬಾವಿಯಿಂದ ಟ್ಯಾಂಕರ್ ಮೂಲಕ ನೀರು ಸಾಗಿಸುವುದನ್ನು ನೋಡಿದ್ದೇವೆ. ಆದರೆ ಈ ಧರೆಪ್ಪ ಉಳ್ಳಾಗಡ್ಡಿಯವರು ತಮ್ಮ ಬಾವಿಯಲ್ಲಿ ನಾಲೈದು ಮೋಟರ್‌ಗಳನ್ನು ಅಳವಡಿಸಿ ನಗರಸಭೆಯ ಮುಖ್ಯ ಪೈಪ್‌ಲೈನ್‌ಗೆ ಸಂಪರ್ಕ ನೀಡಿ ನಿರಂತರ ನೀರು ಒದಗಿಸುವ ಮೂಲಕ ಇಡೀ ಗ್ರಾಮದ ನೀರಿನ ಬವಣೆ ನೀಗಿಸುವಲ್ಲಿ ಯಶಸ್ವಿಯಾಗಿದ್ದು, ಜನರಿಗೆ ಇದು ನಿಜಕ್ಕೂ ಅಕ್ಷಯ ಪಾತ್ರೆಯಾಗಿದೆ.
ನಗರಸಭೆ ಮಾಡಬೇಕಿರುವ ಕೆಲಸವನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುತ್ತಿರುವ ಧರೆಪ್ಪ ತಮ್ಮ ಸ್ವಂತ ತೋಟದ ಬಾವಿಯ ನೀರನ್ನು ಹೀಗೆ ಪೈಪ್‌ಲೈನ್ ಮೂಲಕ ಸರ್ಕಾರಿ ನರಗಳ ಮೂಲಕ ಸರಬರಾಜು ಮಾಡುವ ವಿಧಾನ ಎಲ್ಲಿಯೂ ಕೇಳರಿಯದ ವಿಶೇಷ.
ಈ ಬಾವಿಗೆ ಭೇಟಿ ನೀಡಿದ ತೇರದಾಳ ಶಾಸಕ ಸಿದ್ದು ಸವದಿ, ಇಂತಹ ಅಪರೂಪದ ಬಾವಿಯಿಂದ ಇಡೀ ಹೊಸೂರ ಪಟ್ಟಣಕ್ಕೆ ನೀರು ಪೂರೈಕೆ ಮಾಡುವುದು ಆಶ್ಚರ್ಯ ತಂದಿದೆ. ನೀರನ್ನು ಮಿತವ್ಯಯವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ನೂರು ವರ್ಷಗಳಷ್ಟು ಹಳೆಯದಾಗಿರುವ ಈ ಬಾವಿಯನ್ನು ಎಂದಿಗೂ ಬತ್ತಿರುವುದನ್ನು ಕಂಡಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯರು. ನಿರಂತರ ಬಳಕೆ ಮಾಡುತ್ತಿದ್ದರೂ ಈಗಲೂ ಬಾವಿಯಲ್ಲಿನ ನೀರು ಮತ್ತೆ ಅದೇ ಪ್ರಮಾಣದಲ್ಲಿ ಇರುವುದು ವಿಶೇಷ.
ಹೊಸೂರು ಪಟ್ಟಣದ ಸುಮಾರು 2 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಕೃಷ್ಣಾ ನದಿಯಿಂದ ನಗರಸಭೆ ನೀರು ಸರಬರಾಜು ಮಾಡುವ ಮಾದರಿಯಲ್ಲಿಯೇ ಬಾವಿಯಿಂದ ಪೈಪ್‌ಲೈನ್ ಮೂಲಕ ಎಲ್ಲ ಮನೆಗಳಿಗೆ ತಲುಪುವಂತೆ ಮಾಡಿದ್ದು, ನೀರಿನ ಸಮಸ್ಯೆ ನಿವಾರಣೆಗೆ ಸಹಾಯವಾಗಿದೆ.