ರಾಜಕೀಯದ ಬಗ್ಗೆ ಮೊಟ್ಟಮೊದಲ ಬಾರಿಗೆ ಮಾತನಾಡಿದ ನಟ ವಿಜಯ್:‌ ಟಾರ್ಗೆಟ್‌ 2026?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳಿನ ಅತ್ಯಂತ ಕ್ರೇಜ್ ಹೊಂದಿರುವ ನಾಯಕರಲ್ಲಿ ವಿಜಯ್ ಒಬ್ಬರು. ವಿಜಯ್ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಯಾವಾಗಲೂ ಓಡಾಡುತ್ತಲೇ ಇದೆ. ಕೆಲವು ಹಂತದಲ್ಲಿ ವಿಜಯ್ ಮಕ್ಕಳ್ ಇಯಕ್ಕಂ ಎಂಬ ಪಕ್ಷವನ್ನು ಸ್ಥಾಪಿಸಿದರು. ವಿಜಯ್ ಅವರ ತಂದೆ ಕೂಡ ಈ ಪಕ್ಷವನ್ನು ನೋಂದಾಯಿಸಿದ್ದಾರೆ. ಅನೇಕ ವಿಜಯ್ ಅಭಿಮಾನಿಗಳು ಈ ಪಕ್ಷದ ಪರವಾಗಿ ತಮಿಳುನಾಡಿನಲ್ಲಿ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಆದರೆ ಇಷ್ಟು ವರ್ಷ ವಿಜಯ್ ಈ ಪಕ್ಷಕ್ಕೂ ತನಗೂ ಸಂಬಂಧವಿಲ್ಲ ಎಂಬಂತೆ ಇದ್ದರು. ಇದೀಗ ರಾಜಕೀಯ ಕುರಿತು ಮಾತನಾಡಿರುವುದು ಆಶ್ಚರ್ಯ ಉಂಟುಮಾಡುತ್ತಿದೆ.

ನಿನ್ನೆ ವಿಜಯ್ ಅಭಿಮಾನಿಗಳ ಸಂಘದ ವತಿಯಿಂದ ಹತ್ತನೇ ತರಗತಿ ಹಾಗೂ ಪಿಯುಸಿ ಪಾಸಾದ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಪ್ರತಿಯೊಬ್ಬರಿಗೂ ಐದು ಸಾವಿರ ರೂಪಾಯಿ ಬಹುಮಾನ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ವಿಜಯ್ ವೇದಿಕೆಯಲ್ಲಿ ಸುಮಾರು 1000 ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಉಡುಗೊರೆಗಳನ್ನು ನೀಡಿದರು.

ಈ ಕಾರ್ಯಕ್ರಮದ ವೇಳೆ ವಿಜಯ್‌ ಮಾತನಾಡಿ, ನೀವು ನಾಳಿನ ಮತದಾರರು. ನೀವು ಭವಿಷ್ಯದ ನಾಯಕರನ್ನು ಆಯ್ಕೆ ಮಾಡುತ್ತೀರಿ. ಈಗಿನವರು ಹಣಕ್ಕಾಗಿ ಮತ ಮಾರಿಕೊಳ್ಳುತ್ತಿದ್ದಾರೆ. ಒಬ್ಬ ರಾಜಕಾರಣಿ ಪ್ರತಿ ವೋಟಿಗೆ 1000 ರೂಪಾಯಿ ಹಂಚಿದರೆ, ಕ್ಷೇತ್ರದಾದ್ಯಂತ ಹಂಚಲು ಸರಿಸುಮಾರು 15 ಕೋಟಿ ರೂಪಾಯಿ ಬೇಕು. ಅಂದರೆ ಊಹಿಸಿಕೊಳ್ಳಿ ಆ ವ್ಯಕ್ತಿ ರಾಜಕೀಯದಲ್ಲಿ ಎಷ್ಟು ಸಂಪಾದಿಸಿದ್ದಾರೆ ಎಂದು. ಹಣ ತೆಗೆದುಕೊಳ್ಳದೆ ಮತ ಹಾಕುವಂತೆ ಪೋಷಕರಿಗೆ ಹೇಳಬೇಕು ಎಂದು ಕಮೆಂಟ್ ಮಾಡಿದ್ದಾರೆ. ವಿಜಯ್ ಹೇಳಿಕೆ ತಮಿಳು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಜಯ್ ಮತ್ತೊಮ್ಮೆ ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹಗಳು ಬಲವಾಗುತ್ತಿವೆ. 2026ರಲ್ಲಿ ಸ್ಪರ್ಧಿಸುತ್ತೀರಾ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ವಿಜಯ್ ನೇರವಾಗಿ ಸ್ಪರ್ಧಿಸದಿದ್ದರೂ ತಮ್ಮ ಪಕ್ಷದ ಪರವಾಗಿ ಅಭಿಮಾನಿಗಳನ್ನು ನಿಲ್ಲಿಸಬಹುದು ಎನ್ನಲಾಗಿದೆ. ಇತ್ತೀಚಿಗೆ ವಿಜಯ್ ಹಿಂದೆಂದಿಗಿಂತಲೂ ಹೆಚ್ಚಾಗಿ ಹೊರಗೆ ಬಂದು ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಇದರೊಂದಿಗೆ ವಿಜಯ್ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ದಿನದಿಂದ ದಿನಕ್ಕೆ ಬಲವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!