ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಪ್ರಮುಖ ಐದು ಯೋಜನೆಗಳಲ್ಲಿ ಒಂದಾಗಿರುವ ‘ಗೃಹಜ್ಯೋತಿ’ ಯೋಜನೆಗೆ ಲಾಭ ಪಡೆಯಲು ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲಾಗಿದ್ದು, ಆದಷ್ಟು ಬೇಗ ”ಗೃಹ ಲಕ್ಷ್ಮೀ” ಯೋಜನೆಗೆ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗುವುದು ಎಂದು ಮಹಿಳೆ ಮತ್ತು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವರಿಸಿದ್ದಾರೆ.
ಭಾನುವಾರ ಜಿಲ್ಲೆಯ ಬಸ್ತವಾಡದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾದ ‘ಗೃಹ ಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಕೆ ವಿಳಂಬವಾಗಿದೆ. ಜೂನ್ 15 ರಂದು ಅರ್ಜಿ ಸಲ್ಲಿಕೆ ಆರಂಭ ಎಂದು ಹೇಳಲಾಗಿತ್ತು, ಕೆಲ ಕಾರಣಗಳಿಂದ ಇಂದು ಜೂ. 18ರಿಂದ ಅರ್ಜಿ ಸಲ್ಲಿಕೆ ಆರಂಭಿಸಿದ್ದೇವೆ ಎಂದರು.
‘ಗೃಹ ಲಕ್ಷ್ಮಿ’ ಯೋಜನೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸಲಿದ್ದೇವೆ. ‘ಗೃಹ ಲಕ್ಷ್ಮೀ’ ಅಪ್ಲಿಕೇಶನ್ ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.
‘ಗೃಹ ಲಕ್ಷ್ಮೀ’ ಯೋಜನೆ: ಸಿಬ್ಬಂದಿ ನೇಮಕ
‘ಗೃಹ ಲಕ್ಷ್ಮೀ’ ಯೋಜನೆ ಸಂಬಂಧ ಪ್ರತಿ ಬೂತ್ ಮಟ್ಟದಲ್ಲಿ ಮಹಿಳೆ ಸೇರಿದಂತೆ ಒಟ್ಟು 4 ಮಂದಿ ನೇಮಕ ಮಾಡಲಾಗಿದೆ. ರಾಜ್ಯಾದ್ಯಂತ ಸುಮಾರು 1,13 ಲಕ್ಷ ಕುಟುಂಬದ ಯಜಮಾನಿಯರು ಯೋಜನೆ ಲಾಭ ಪಡೆಯಲಿದ್ದಾರೆ. ಅವರೆಲ್ಲರ ಖಾತೆಗೂ ಸರ್ಕಾರವು ಮಾಸಿಕ 2000 ರೂ. ಜಮೆ ಮಾಡಲಿದೆ ಎಂದು ಹೇಳಿದರು.