ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪಾಲಿಸಬೇಕಾದ ಕೆಲ ನಿಯಮಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಮಣಪ್ಪುರಂ ಫೈನಾನ್ಸ್ ಸಂಸ್ಥೆಗೆ ಭಾರತೀಯ ರಿಸರ್ವ್ ಬ್ಯಾಂಕ್ 20 ಲಕ್ಷ ರೂ ದಂಡ ವಿಧಿಸಿದೆ. ಆದರೆ, ಗ್ರಾಹಕರ ವ್ಯವಹಾರದೊಂದಿಗೆ ಕಂಪನಿ ಯಾವುದೇ ಲೋಪ ಆಗಿದೆ ಎಂದು ಅರ್ಥೈಸಿಕೊಳ್ಳಬೇಕಿಲ್ಲ. ಕೆಲ ಕಾನೂನು ಪಾಲನೆಯಲ್ಲಿ ಲೋಪವಾಗಿದ್ದಕ್ಕೆ ದಂಡ ಹಾಕಲಾಗಿದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಮಣಪ್ಪುರಂ ಫೈನಾನ್ಸ್ ಕಂಪನಿಯ ಹಣಕಾಸು ಸ್ಥಿತಿಯನ್ನು ಆರ್ಬಿಐ ಪರಿಶೀಲನೆ ನಡೆಸಿದ್ದು, ಕಂಪನಿಯ ರಿಸ್ಕ್ ಅಸೆಸ್ಮೆಂಟ್ ರಿಪೋರ್ಟ್, ಇನ್ಸ್ಪೆಕ್ಷನ್ ರಿಪೋರ್ಟ್, ಸೂಪರ್ವೈಸರಿ ಲೆಟರ್ ಇತ್ಯಾದಿ ದಾಖಲೆಗಳನ್ನೂ ಪರಿಶೀಲಿಸಿತ್ತು. 90 ದಿನಗಳಿಂದಲೂ ಪಾವತಿಯಾಗದೇ ಸ್ಥಗಿತಗೊಂಡಿದ್ದ ಕೆಲ ಗೋಲ್ಡ್ ಲೋನ್ ಖಾತೆಗಳನ್ನು ಎನ್ಪಿಎ ಅಥವಾ ಅನುತ್ಪಾದಕ ಆಸ್ತಿ ಎಂದು ವರ್ಗೀಕರಿಸಲು ಕಂಪನಿ ವಿಫಲವಾಗಿದೆ. ಇದು ನಿಯಮದ ಉಲ್ಲಂಘನೆ ಎಂದು ಆರ್ಬಿಐ ಪರಿಗಣಿಸಿದೆ. ಅಲ್ಲದೆ 2020-21ರ ಹಣಕಾಸು ವರ್ಷದಲ್ಲಿ ಕೆಲ ಸಾಲದ ಖಾತೆಗಳಿಗೆ ಲೋನ್–ಟು–ವ್ಯಾಲ್ಯೂ ರೇಷಿಯೋವನ್ನು ಸರಿಯಾಗಿ ಪಾಲಿಸದಿರುವುದು ಬೆಳಕಿಗೆ ಬಂದಿದೆ.