ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನೂತನ ಸರಕಾರದ ಶಕ್ತಿ ಯೋಜನೆ ಅಡಿ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶದ ಅನುಕೂಲವನ್ನು ಪಡೆಯುತ್ತಿರುವ ಮಹಿಳೆಯರ ಜನಸಂದಣಿ ಜಿಲ್ಲೆಯ ನಾನಾ ಪುಣ್ಯ ಕ್ಷೇತ್ರಗಳಲ್ಲಿ ಭಾನುವಾರವು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದೆ. ಧರ್ಮಸ್ಥಳ,ಸೌತಡ್ಕ, ಸುಬ್ರಹ್ಮಣ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಶನಿವಾರಕ್ಕಿಂತಲೂ ಅತಿ ಹೆಚ್ಚಿನ ಮಹಿಳಾ ಭಕ್ತಾದಿಗಳು ಕಂಡುಬಂದಿದ್ದಾರೆ.
ಬಸ್ ನಿಲ್ದಾಣಗಳಲ್ಲಿ ನೂಕುನುಗ್ಗಲು
ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಬಸ್ ಗಳಿಗೆ ಅತಿಹೆಚ್ಚಿನ ಜನಸಂದಣಿ ಕಂಡುಬಂದಿದ್ದು, ಬಸ್ ಗಳು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಬಸ್ ನ್ನು ಮುತ್ತುವ ಪ್ರಯಾಣಿಕರು ಡ್ರೈವರ್ ಬಾಗಿಲಿನ ಮೂಲಕ, ಕಿಟಕಿಗಳ ಮೂಲಕವು ಬಸ್ಸನ್ನೇರುವ ಪ್ರಯತ್ನ ನಡೆಯುತ್ತಿದೆ. ಸೀಟ್ ಕಾದಿರಿಸಲು ಬ್ಯಾಗುಗಳನ್ನು ಹಾಕಿರುವ ಮಂದಿಯ ಬ್ಯಾಗುಗಳನ್ನು ಸ್ಥಳಾಂತರಿಸಿ ಇತರ ಪ್ರಯಾಣಿಕರು ಸೀಟು ಪಡೆಯುವುದರಿಂದ ಇದು ಮಾತಿನ ಚಕಮಕಿಗೂ ಕಾರಣವಾಗುತ್ತಿದೆ.ಬಸ್ ಗಳಲ್ಲಿ ಶೇ.70ಕ್ಕಿಂತ ಹೆಚ್ಚು ಮಹಿಳಾ ಪ್ರಯಾಣಿಕರೇ ಇರುತ್ತಾರೆ. ಚಾಲಕರು ನಿರ್ವಾಹಕರು ಪ್ರಯಾಣಿಕರನ್ನು ನಿಭಾಯಿಸಲು ಹರಸಾಹಸ ಪಡಬೇಕಾದ ಸ್ಥಿತಿ ಬಂದೊದಗಿದೆ.
ಬಸ್ ಗಳ ಬಿಡಿ ಭಾಗಗಳೆ ಕಳಚುತ್ತಿದೆ!
ಬಸ್ ಗಳನ್ನು ಏರುವ ತವಕದಲ್ಲಿ ಕೆಲವೊಂದು ಬಸ್ ಗಳ ಬಿಡಿ ಭಾಗಗಳನ್ನು ಪ್ರಯಾಣಿಕರು ಕಳಚಿ ಹಾಕುತ್ತಿದ್ದಾರೆ. ಒಂದೂರಿಂದ ಇನ್ನೊಂದು ಊರಿಗೆ ಪ್ರಯಾಣಿಸುವ ಪ್ರಯಾಣಿಕರು ಬಸ್ ಗಳಲ್ಲಿ ತಮ್ಮ ಬಟ್ಟೆಗಳನ್ನು ಒಣಗಲು ಹಾಕಿರುವ ದೃಶ್ಯವು ಕೆಲವು ಬಸ್ ಗಳಲ್ಲಿ ಕಂಡುಬಂದಿದೆ.
ಹೆಚ್ಚುವರಿ ಬಸ್
ಶಾಲೆ ಕಾಲೇಜುಗಳಿಗೆ ಭಾನುವಾರ ರಜೆ ಇರುವ ಕಾರಣ ಕೆಎಸ್ಸಾರ್ಟಿಸಿಯ ಸ್ಕೂಲ್ ಟ್ರಿಪ್ ಇರದ ಕಾರಣ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಅತೀ ಹೆಚ್ಚಿನ ಬಸ್ ಗಳನ್ನು ಬಿಡಲಾಗಿದೆ. ಬೆಂಗಳೂರಿನಿಂದ 70 ವಿಶೇಷ ಬಸ್ ಗಳು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಧರ್ಮಸ್ಥಳಕ್ಕೆ ಅನೇಕ ಹೆಚ್ಚುವರಿ ಬಸ್ ಗಳನ್ನು ಬಿಡಲಾಗಿದೆ. ಕೆಲವೊಂದು ಡಿಪೋ ಗಳಲ್ಲಿ ಬಸ್ ಗಳ ಕೊರತೆ ಇದ್ದರೆ ಇನ್ನು ಕೆಲವು ಡಿಪೋ ಗಳಲ್ಲಿ ಚಾಲಕ,ನಿರ್ವಾಹಕರ ಕೊರತೆಯೂ ಇದೆ ಈ ಕಾರಣದಿಂದ ಎಕ್ಸ್ಟ್ರಾ ಬಸ್ ಬಿಡಲು ಸಮಸ್ಯೆ ಉಂಟಾಗುತ್ತಿದೆ ಎಂದು ಕೆಎಸ್ಆರ್ಟಿಸಿಯ ಅಧಿಕಾರಿ ತಿಳಿಸಿದ್ದಾರೆ. ಸೋಮವಾರವೂ ಇದೆ ಸ್ಥಿತಿ ಮುಂದುವರಿದರೆ ಶಾಲಾ ಟ್ರಿಪ್ ಇರುವ ಕಾರಣ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.