– ಮಲ್ಲಿಕಾರ್ಜುನ ತುಂಗಳ
ರಬಕವಿ ಬನಹಟ್ಟಿ: ಕೃಷ್ಣಾ ನದಿ ಖಾಲಿಯಾಗಿರುವುದರಿಂದ ಮಹಿಷವಾಡಗಿ ಬ್ಯಾರೇಜನ ಹಿಂಭಾಗದಲ್ಲಿ ಕಟ್ಟಿರುವ ಈಶ್ವರ ದೇವಾಲಯ ಪೂರ್ತಿಯಾಗಿ ಕಾಣತೊಡಗಿದ್ದು, ಕೃಷ್ಣೆ ಪೂರ್ತಿ ಬರಿದಾದಾಗ ಮಾತ್ರ ಅಪರೂಪ ಎನ್ನುವಂತೆ ವರ್ಷದಲ್ಲಿ ಒಂದು ಬಾರಿ ಅಥವಾ ಬರ ಇದ್ದಾಗ ಮಾತ್ರ ಈ ದೇವಸ್ಥಾನ ಗೋಚರಿಸುವುದರ ಜೊತೆಗೆ ಪೂಜೆಗೊಳ್ಳವ ವಿಶೇಷ ದೇವಸ್ಥಾನವಾಗಿದೆ.
ಪೂರ್ವಕ್ಕೆ ಮುಖವಾಗಿ, ಬೃಹದಾಕಾರದ ಕೃಷ್ಣ ಶಿಲೆಯಿಂದ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಯಾವುದೇ ಕೆತ್ತನೆಯ ಶಿಲ್ಪಗಳು ಇಲ್ಲ. ಆದರೂ ಇದು ನೋಡುಗರನ್ನು ಆಕರ್ಷಿಸುತ್ತದೆ. ರಬಕವಿಯ ಮರೆಗುದ್ದಿ ಮನೆತನದ ಹಿರಿಯ ಅಜ್ಜ ಬಾಳಪ್ಪ ಮರೆಗುದ್ದಿ ಇದನ್ನು ಕಟ್ಟಿಸಿದ್ದು ಎಂದು ತಿಳಿದು ಬಂದಿದ್ದು. ಈಗಲೂ ಈ ದೇವಸ್ಥಾನಕ್ಕೆ ಬಾಳಪ್ಪನ ಗುಡಿ ಎಂದು ಕರೆಯುವುದಿದೆ. ಆದರೆ ಇದು ಈಶ್ವರ ದೇವಸ್ಥಾನ.
ದೇವಾಸ್ಥಾನ ಕಟ್ಟಿಸು
ಮರೆಗುದ್ದಿ ಮನೆತನದವರು ಹೇಳುವ ಪ್ರಕಾರ ‘ನಮ್ಮ ಮುತ್ತ್ಯಾಗ ಗಂಡು ಸಂತಾನ ಇರಲಿಲ್ಲ. ಇಬ್ಬರು ಹೆಣ್ಣು ಮಕ್ಕಳು, ಅವರದು ಮದುವೆಯಾಗಿತ್ತು. ಬಾಳಪ್ಪ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದ. ಚಿಲ್ಲರೆ ನಾಣ್ಯಗಳಿಂದ ಸಾಕಷ್ಟು ಹಣ ಕೂಡಿಸಿದ್ದ. ಆ ಹಣ ಏನು ಮಾಡುವುದು ಎಂಬ ವಿಚಾರ ಹಿರಿಯರನ್ನು ಕೇಳಿದಾಗ, ಅವರು ಕೃಷ್ಣಾ ನದಿಯ ದಡದಲ್ಲಿ ಒಂದು ದೇವಾಸ್ಥಾನ ಕಟ್ಟಿಸು ಎಂದು ಸಲಹೆ ನೀಡಿದರು.’
ಮೋಡಿ ಭಾಷೆಯಲ್ಲಿ ದಾಖಲೆ
ಆಗ ಬನಹಟ್ಟಿ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ಅದರಂತೆ ರಬಕವಿ ಪಟ್ಟಣ ಸಾಂಗ್ಲಿ ಸಂಸ್ಥಾನಕ್ಕೆ ಸೇರಿತ್ತು. ಆಗಿನ ಸಾಂಗ್ಲಿ ಸಂಸ್ಥಾನದಿಂದ ದೇವಾಲಯ ಕಟ್ಟಲು ಪರವಾನಗಿ ಪಡೆದು 1912ರಲ್ಲಿ ಈ ದೇವಾಲಯ ನಿರ್ಮಿಸಲಾಯಿತು. ಧಾರ್ಮಿಕ ಕಾರ್ಯವಾಗಿದ್ದರಿಂದ ನಮ್ಮ ಮುತ್ತ್ಯಾ ಯಾವುದಕ್ಕೂ ನನ್ನ ಹೆಸರು ಬೇಡ ಅಂದರು. ಈ ದೇವಾಲಯ ಕಟ್ಟಿಸಿದರ ಬಗ್ಗೆ ಸಾಂಗ್ಲಿಯಲ್ಲಿ ದಾಖಲೆಗಳು ಮೋಡಿ ಭಾಷೆಯಲ್ಲಿ ಸಿಗುತ್ತವೆ ಎನ್ನುತ್ತಾರೆ ಮರೆಗುದ್ದಿ ಮನೆತನದವರು.
ದೇವಾಲಯ ನೀರೊಳಗೆ ಮುಳುಗಿ ಹೋಯಿತು
ಮೊದಲು ನದಿಯ ವ್ಯಾಪ್ತಿ ಬಹಳ ಕಡಿಮೆ ಇದ್ದ ಕಾರಣ ದೇವಾಲಯ ನದಿಯ ದಡದಲ್ಲಿ ಇತ್ತು. ಆದರೆ 1971ರಲ್ಲಿ ವಿರೇಂದ್ರ ಪಾಟೀಲ ಸರ್ಕಾರ ರಬಕವಿ- ಬನಹಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ್ ನಿರ್ಮಿಸಲು ಅನುಮತಿ ನೀಡಿತು. 1973ರಲ್ಲಿ ದೇವರಾಜ ಅರಸು ಸರ್ಕಾರವಿದ್ದಾಗ ಪ್ರಥಮ ಬಾರಿಗೆ ನೀರು ತಡೆ ಹಿಡಿಯಲಾಯಿತು. ಕಾರಣ ದೇವಾಲಯ ನೀರೊಳಗೆ ಮುಳುಗಿ ಹೋಯಿತು. ಆಗ ಅದೇ ನದಿಯ ಮಧ್ಯ ಭಾಗವಾಯಿತು. ಶತಮಾನಗಳು ಕಳೆದರೂ ಯಾವುದೇ ನೀರಿಗೂ ಗರ್ಭಗುಡಿಯಲ್ಲಿರುವ ಮೂರ್ತಿಗಳು ಅಲುಗಾಡದೇ ಹಾಗೇ ನಿಂತಿರುವುದು ವಿಶೇಷ.
ಹಳೆ ತಲೆಮಾರಿನ ಭಕ್ತರಿದ್ದಾರೆ:
ಈ ದೇವಾಲಯಕ್ಕೆ ಹಳೆಯ ತಲೆಮಾರಿನ ಹಿರಿಯಜ್ಜ ಹಾಗೂ ಅವರ ಪಾಲನೆಯಿಂದ ಈಗಲೂ ಹಲವಾರು ಜನ ಭಕ್ತರಿದ್ದಾರೆ. ನದಿ ಪಾತ್ರ ನೀರಿನಿಂದ ಕಡಿಮೆಯಾಗುತ್ತಿದ್ದಂತೆ ಈಜಿಕೊಂಡು ದೇವಾಲಯದೊಳಕ್ಕೆ ಪ್ರವೇಶ ಮಾಡಿ ಭಕ್ತರು ನಮಸ್ಕರಿಸುತ್ತಾರೆ. ಅಲ್ಲದೆ ನದಿಯೊಳಗೆ ನೀರಿನಿಂದ ಮುಳುಗಿದರೂ ಸಹಿತ ಸೇತುವೆ ಮೇಲೆಯೇ ನಿಂತು ನಮಸ್ಕರಿಸುವುದರೊಂದಿಗೆ ನೈವೆದ್ಯ ನೀಡುವ ಸಂಪ್ರದಾಯವಿದೆ.