ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ರಾಜ್ಯ ಭುವನೇಶ್ವರದಲ್ಲಿ ಅತ್ಯಂತ ಯಶಸ್ವಿಯಾಗಿ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್‌ಬಾಲ್ ಟೂರ್ನಿಯನ್ನು ಆಯೋಜನೆ ಮಾಡಿದೆ.
ಟೂರ್ನಿಯಲ್ಲಿ ಭಾರತ ಫುಟ್ಬಾಲ್ ತಂಡ ಚಾಂಪಿಯನ್ ಆಗಿದೆ. ಲೆಬನಾನ್ ತಂಡವನ್ನು ಫೈನಲ್‌ನಲ್ಲಿ 2-0 ಗೋಲುಗಳಿಂದ ಮಣಿಸುವ ಮೂಲಕ ಇಗೋರ್ ಸ್ಟೀಮ್ಯಾಕ್ ತರಬೇತಿಯ ಭಾರತ ತಂಡ ಟ್ರೋಫಿಯನ್ನು ಜಯಿಸಿದೆ.
ಟ್ರೋಫಿ ಗೆದ್ದ ಬೆನ್ನಲ್ಲಿಯೇ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರ ಭಾರತ ತಂಡಕ್ಕೆ 1 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಘೋಷಣೆ ಮಾಡಿದೆ.
ಇದರ ಬೆನ್ನಲ್ಲೇ ಭಾರತ ಫುಟ್ಬಾಲ್ ತಂಡ ಒಡಿಶಾದ ಬಾಲಸೋರ್‌ನಲ್ಲಿ ರೈಲುಗಳ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡುವಂತೆ 20 ಲಕ್ಷ ರೂಪಾಯಿಯನ್ನು ನೀಡಿದೆ.
20 ಲಕ್ಷ ರೂಪಾಯಿ ಹಣವನ್ನು ರೈಲು ದುರಂತದಲ್ಲಿ ಮೃತಪಟ್ಟದ ಕುಟುಂಬದ ಪರಿಹಾರ ಹಾಗೂ ಪುನರ್ವಸತಿಗಾಗಿ ಬಳಸಿಕೊಳ್ಳುವಂತೆ ಫುಟ್‌ಬಾಲ್ ಟೀಮ್ ತಿಳಿಸಿದೆ. ಒಡಿಶಾ ಸರ್ಕಾರ 1 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿದ ಬೆನ್ನಲ್ಲಿಯೇ ಭಾರತೀಯ ಫುಟ್‌ಬಾಲ್ ಟೀಮ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡನ್‌ನಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದೆ. ಇದು ವಿಜೇತ ತಂಡದ ಸಂಪೂರ್ಣ ಆಟಗಾರರು ಹಾಗೂ ಸಿಬ್ಬಂದಿ ನಿರ್ಧಾರವಾಗಿದ್ದು, ತಂಡದ ಡ್ರೆಸಿಂಗ್ ರೂಮ್‌ನಲ್ಲಿಯೇ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದೆ.
‘ನಮ್ಮ ಗೆಲುವಿಗಾಗಿ ಒಡಿಶಾ ಸರ್ಕಾರವು ತಂಡಕ್ಕೆ ನಗದು ಬೋನಸ್ ನೀಡುವ ಘೋಷಣೆ ಮಾಡಿದ್ದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಡ್ರೆಸ್ಸಿಂಗ್ ರೂಮ್‌ನ ತ್ವರಿತ ಮತ್ತು ಸಾಮೂಹಿಕ ನಿರ್ಧಾರದಲ್ಲಿ, ನಾವು ಅದರಲ್ಲಿ 20 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಲು ನಿರ್ಧರಿಸಿದ್ದೇವೆ. ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ಸಂಭವಿಸಿದ ದುರದೃಷ್ಟಕರ ರೈಲು ಅಪಘಾತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಈ ಹಣ ಬಳಸಿಕೊಳ್ಳಬೇಕು’ ಎಂದು ತಿಳಿಸಿದೆ.
ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಹಣ ನೀಡಿ ಅವರ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಆದರೆ, ಕುಟುಂಬದ ಖುಷಿಗೆ ಈ ಹಣ ಸಣ್ಣ ಪ್ರಮಾಣದ ಪಾತ್ರವನ್ನು ವಹಿಸಬಹುದು ಎಂದು ಭಾವಿಸುತ್ತೇವೆ ಎಂದು ಟ್ವಿಟರ್‌ನಲ್ಲಿ ತಿಳಿಸಲಾಗಿದೆ.
ರೈಲು ಅಪಘಾತದಲ್ಲಿ ಒಟಟು 291 ಮಂದಿ ಅಧಿಕೃತವಾಗಿ ಮೃತಪಟ್ಟಿದ್ದರೆ 1 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.