ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್: ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ ಭವಾನಿ ದೇವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ವುಕ್ಸಿಯಲ್ಲಿ ನಡೆದ ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್​ನಲ್ಲಿ ಭಾರತದ ಪೆನ್ಸರ್ ಭವಾನಿ ದೇವಿ (Bhavani Devi) ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಹಾಲಿ ವಿಶ್ವ ಚಾಂಪಿಯನ್ ಮಿಸಾಕಿ ಎಮುರಾ ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿ ಭವಾನಿ ದೇವಿ ಫೆನ್ಸಿಂಗ್‌ನಲ್ಲಿ (ಕತ್ತಿ ವರಸೆ) ಭಾರತಕ್ಕೆ ಮೊದಲ ಕಂಚಿನ ಪದಕ ತಂದುಕೊಟ್ಟಿದ್ದಾರೆ.

ವಿಶ್ವದ ನಂಬರ್ ಒನ್ ಆಟಗಾರ್ತಿ ಮಿಸಾಕಿ ಎಮುರಾ ಅವರನ್ನು 15-10 ಅಂಕಗಳಿಂದ ಸೋಲಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದ ಭವಾನಿ ದೇವಿ ಸೆಮಿಫೈನಲ್ ಪ್ರವೇಶಿಸಿದ್ದರು.
ಆದರೆ ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನ್‌ನ ಝೈನಾಬ್ ದೈಬೆಕೋವಾ ವಿರುದ್ಧ ಭವಾನಿ 14-15 ಅಂತರದಿಂದ ಸೋಲನುಭವಿಸಿದರು. ಇದಾಗ್ಯೂ ಮೂರನೇ ಸ್ಥಾನ ಪಡೆಯುವ ಮೂಲಕ ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್​ನಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಬರೆದರು.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದ್ದಾರೆ. ನಿಮ್ಮ ಈ ಸಾಧನೆಯು ಸಹ ಕ್ರೀಡಾಪಟುಗಳಿಗೆ ಸ್ಫೂರ್ತಿ ಆಗಲಿದೆ. ಅಲ್ಲದೆ ಈ ಕ್ರೀಡೆಗೂ ಅರ್ಹವಾದ ಮನ್ನಣೆಗೆ ಸಿಗುವಂತೆ ಮಾಡಲಿದೆ. ನಿಮ್ಮ ಪ್ರಯಾಣವು ಭಾರತೀಯ ಫೆನ್ಸಿಂಗ್‌ನಲ್ಲಿ ಹೊಸ ಯುಗಕ್ಕೆ ನಾಂದಿಯಾಡಲಿದೆ. ಈ ಮಹೋನ್ನತ ಸಾಧನೆಗಾಗಿ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು, ನೀವು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಎತ್ತರಕ್ಕೆ ಏರುತ್ತಿರಲಿ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!