ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲ ಬಂತೆಂದರೆ ʻಬಿದಿರ ಕಂದಮ್ಮʼಗಳ ಉಗಮ! ಹೌದು ಕರಾವಳಿಯಲ್ಲಿರುವ ಬಿದಿರುಗಳು ಪುಟ್ಟ ಪುಟ್ಟ ಮರಿಗಳಿಗೆ ಜನ್ಮನೀಡುತ್ತವೆ! ಈ ಮರಿಬಿದಿರನ್ನು ʻಕಣಿಲೆʼ ಎಂದು ಕರೆಯಲಾಗುತ್ತದೆ. ಮುಂಗಾರು ಮಳೆ ಹೊಯ್ದು ಭೂಮಿ ತಂಪಾದಂತೆ ಬಿದಿರುಗಳ ವಂಶಾಭಿವೃದ್ಧಿ ಆರಂಭವಾಗುತ್ತದೆ. ಒಂದೆರಡು ಸಿಡಿಲು ಬಂದು ಮಳೆಹೊಯ್ದರೆ ಸಾಕು. ಬಿದಿರ ಮರಿಗಳು ಮಣ್ಣೊಡೆದು ಹೊರಬರಲಾರಂಭಿಸುತ್ತವೆ. ಈ ಕಣಿಲೆ ಒಂದು ಉತ್ಕೃಷ್ಟ ಆಹಾರವೂ ಹೌದು. ರುಚಿಕರವಾಗಿರುವ ಕಣಿಲೆಗೆ ಮನಸೋಲದವರೇ ಇಲ್ಲ.
ಇದು ಉಷ್ಣ ಆಹಾರ ಎಂದೇ ಪ್ರಸಿದ್ಧಿ. ಅತಿಯಾಗಿ ತಿಂದರೆ ಅಪಾಯವೂ ಹೌದು. ಮಳೆಗಾಲದಲ್ಲಿ ವಾತಾವರಣದಲ್ಲಿ ಉಷ್ಣದ ಪ್ರಮಾಣ ಕಡಿಮೆಯಾಗಿ ಶೀತದ ಹವೆ ಇರುತ್ತದೆ. ಮಾನವನ ದೇಹವನ್ನು ಅತಿಯಾದ ಶೀತದಿಂದ ಕಾಪಾಡಿಕೊಳ್ಳುವ ಸಲುವಾಗಿಯೇ ಹಿಂದಿನವರು ʻಆಟಿಯಲ್ಲಿ ಕಣಿಲೆʼ ಪದಾರ್ಥ ಬಳಸಿ ಎನ್ನುತ್ತಿದ್ದರಂತೆ!. ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಈ ಕಣಿಲೆಯ ಬಳಕೆಯಿದೆ. ಇತ್ತೀಚೆನ ದಿನಗಳಲ್ಲಿ ಎಲ್ಲಾ ಭಾಗಗಳಲ್ಲೂ ಇದರ ಬಳಕೆ ಆರಂಭಗೊಂಡಿದೆ.
ಕಣಿಲೆಯ ಗಸಿ, ಉಪ್ಪಿನಕಾಯಿ,ಪಲ್ಯ, ಪತ್ರೊಡೆ ಹೀಗೆ ಹಲವು ಅಡುಗೆಗಳಲ್ಲಿ ಬಳಸಲಾಗುತ್ತಿದೆ. ಬಿದಿರ ಮೆಳೆಗಳಲ್ಲಿರುವ ಕಣಿಲೆಯನ್ನು ಜಾಗರೂಕತೆಯಿಂದ ʻಮುರಿದುʼ ತರಬೇಕು. ಕತ್ತಿಯಿಂದ ಕಡಿದು ತರಬಾರದೆಂಬ ನಂಬಿಕೆಯಿದೆ. ಹೊರಭಾಗದಲ್ಲಿರುವ ಕವಚಗಳನ್ನು ಕಿತ್ತು ಬಿಳಿಯ ಭಾಗವನ್ನು ತುಂಡುಮಾಡಿ, ಸಣ್ಣದಾಗಿ ಹೆಚ್ಚಿ ನೀರಿನಲ್ಲಿ ನೆನೆಯಲು ಇಡಿ. ಸ್ವಲ್ಪ ಅರಶಿನ ಹಾಕಿ ಒಂದು ದಿನಗಳ ಕಾಲ ನೆನೆಯಲು ಬಿಡಿ. ನೀರು ಬಸಿದು ನಂತರ ಆಹಾರ ಪದಾರ್ಥಕ್ಕೆ ಬಳಕೆ ಮಾಡಬಹುದಾಗಿದೆ.