ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ಮುಂದುವರೆಸಿದೆ.ಮಂಗಳವಾರ ರೈಲ್ವೆ ಜೂನಿಯರ್ ಎಂಜಿನಿಯರ್ (ಜೆಇ) ಅಮೀರ್ ಖಾನ್ ಎಂಬವರು ಬಾಡಿಗೆಗಿದ್ದ ಮನೆಯಲ್ಲಿ ತನಿಖಾ ತಂಡ ಪರಿಶೀಲನೆ ನಡೆಸಿದೆ.
ಈ ವೇಳೆ, ರೈಲ್ವೆ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂಬ ವರದಿಯನ್ನು ಇಲಾಖೆ ತಳ್ಳಿ ಹಾಕಿದೆ. ಯಾವುದೇ ಸಿಬ್ಬಂದಿ ನಾಪತ್ತೆಯಾಗಿಲ್ಲ ಹಾಗೂ ತಲೆಮರೆಸಿಕೊಂಡಿಲ್ಲ ಎಂದು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಜೂನ್ 2ರಂದು ದೇಶವನ್ನು ಬೆಚ್ಚಿಬೀಳಿಸಿದ್ದ ರೈಲುಅಪಘಾತದಲ್ಲಿ ಇದುವರೆಗೆ 292 ಮಂದಿ ಸಾವನ್ನಪ್ಪಿದ್ದು, 1100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕೇಂದ್ರ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ. ಈಗಾಗಲೇ ಅಪಘಾತದ ಸ್ಥಳ, ಹಳಿ ಹಾಗೂ ಸಿಗ್ನಲ್ ರೂಂ ಸೇರಿದಂತೆ ಘಟನೆ ಕುರಿತು ಮಾಹಿತಿಯನ್ನು ಸಿಬಿಐ ಅಧಿಕಾರಿಗಳು ಕಲೆಹಾಕಿ, ಕೆಲವು ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.
ಇದೀಗ ಸೋರೋದಲ್ಲಿರುವ ಸಿಗ್ನಲ್ ಜೆಇ ಅಮೀರ್ ಖಾನ್ ಎಂಬವರ ಬಾಡಿಗೆ ಮನೆಯನ್ನು ತನಿಖಾ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಅಲ್ಲದೇ, ಅಮೀರ್ ಖಾನ್ ಸಮ್ಮುಖದಲ್ಲಿ ಆರು ಸದಸ್ಯರ ಸಿಬಿಐ ತಂಡವು ಬಾಡಿಗೆ ಮನೆಯ ಬಾಗಿಲು ತೆರೆದು ತನಿಖೆ ನಡೆಸಿದೆ. ಈ ಅಪಘಾತಕ್ಕೆ ಕಾರಣವಾದ ಸಂದರ್ಭ ಪತ್ತೆ ಹಚ್ಚಲು ಸಿಬಿಐ ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ ಅಜ್ಞಾತ ಸ್ಥಳದಲ್ಲಿ ಅಮೀರ್ ಖಾನ್ ಅವರನ್ನು ವಿಚಾರಣೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಮತ್ತೊಂದೆಡೆ, ಸಿಗ್ನಲ್ ಜೆಇ ಮತ್ತು ಕುಟುಂಬ ಬಾಡಿಗೆ ಮನೆಯಿಂದ ನಾಪತ್ತೆಯಾಗಿದೆ ಎಂದು ವರದಿಯಾಗಿತ್ತು. ಆದರೆ, ಈ ವರದಿಯನ್ನು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ) ಆದಿತ್ಯ ಕುಮಾರ್ ಚೌಧರಿ ಅಲ್ಲಗೆಳೆದಿದ್ದಾರೆ. ಬಾಲಾಸೋರ್ ರೈಲು ಅಪಘಾತದ ತನಿಖೆಯಲ್ಲಿ ಭಾಗಿಯಾಗಿರುವ ಬಹನಾಗಾ ಸಿಬ್ಬಂದಿ ಕಾಣೆಯಾಗಿದ್ದಾರೆ ಎಂಬ ಮಾಧ್ಯಮ ವರದಿಗಳು ವಾಸ್ತವಕ್ಕೆ ದೂರವಾಗಿವೆ. ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದು ಕೇಂದ್ರೀಯ ತನಿಖಾ ದಳದೊಂದಿಗೆ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.