ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ, ಥಾಣೆ ಜಿಲ್ಲೆಯ ಶಾಸಕಿ ಗೀತಾ ಭಾರತ್ ಜೈನ್, ಮೀರಾ ಭಯ್ಯಾದರ್ ಮುನ್ಸಿಪಲ್ ಕಾರ್ಪೊರೇಷನ್ (ಎಂಬಿಎಂಸಿ) ನಲ್ಲಿ ಕೆಲಸ ಮಾಡುವ ಜೂನಿಯರ್ ಸಿವಿಲ್ ಇಂಜಿನಿಯರ್‌ಗೆ ಕಪಾಳಮೋಕ್ಷ ಮಾಡಿರುವ ಘಟನೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಆತನ ಕೊರಳಪಟ್ಟಿ ಹಿಡಿದು ಕೆನ್ನೆಗೆ ಬಾರಿಸಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲು ಶಾಸಕೊ ಇಬ್ಬರು ಇಂಜಿನಿಯರ್‌ಗಳಿಗೆ ಛೀಮಾರಿ ಹಾಕುತ್ತಿರುವುದು ಕಂಡುಬಂದಿದೆ. ಸ್ವಲ್ಪ ಹೊತ್ತು ಕೋಪ ತಡೆಯಲಾರದೆ ಜೂನಿಯರ್ ಸಿವಿಲ್ ಇಂಜಿನಿಯರ್ ಮೇಲೆ ಕೈ ಮಾಡಿದ್ದಾರೆ.
ಎಂ.ಬಿ.ಎಂ.ಸಿ.ಯಲ್ಲಿನ ಅಕ್ರಮ ಕಟ್ಟಡಗಳನ್ನು ಮುಂಗಾರು ಹಂಗಾಮಿಗೂ ಮುನ್ನವೇ ನೆಲಸಮ ಮಾಡಿದ್ದಕ್ಕೆ ನೌಕರನ ಮೇಲೆ ಕೈ ಮಾಡಿದ್ದಾಗಿ ತಿಳಿದುಬಂದಿದೆ. ಪೆಂಕರ್‌ಪಾಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಳೆಗಾಲಕ್ಕೂ ಮುನ್ನವೇ ಕಟ್ಟಡಗಳ ಧ್ವಂಸದಿಂದ ಅಲ್ಲಿನ ನಿವಾಸಿಗಳು ಮಕ್ಕಳೊಂದಿಗೆ ರಸ್ತೆಗೆ ಬಿದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗ ಅವರಿಗೆ ವಾಸಿಸಿಲು ಕಟ್ಟಡವಿಲ್ಲ ಮಳೆಗಾಲ ಬೇರೆ ಎಂದು ತರಾಟೆಗೆ ತೆಗೆದುಕೊಂಡರು.
ಗೀತಾ ಜೈನ್ ಈ ಹಿಂದೆ ಬಿಜೆಪಿಯಿಂದ ಮೇಯರ್ ಆಗಿದ್ದರು. 2019ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಪ್ರಸ್ತುತ ಅವರು ಬಿಜೆಪಿ-ಶಿವಸೇನೆ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ವರ್ತನೆಗೆ ಟೀಕೆ ವ್ಯಕ್ತವಾಗಿದೆ. ಆದರೆ, ಶಾಸಕರು ಘಟನೆಗೆ ವಿವರಣೆ ಕೊಟಿದ್ದಾರೆ. ಮಳೆಗಾಲದ ಮೊದಲು ಕಟ್ಟಡಗಳನ್ನು ಏಕೆ ಕೆಡವಿದ್ದೀರಿ ಎಂದು ನಾನು ಇಬ್ಬರು ಎಂಜಿನಿಯರ್‌ಗಳನ್ನು ಕೇಳಿದೆ. ಕೆಡವಲಾದ ಮನೆ ಮಹಿಳೆಗೆ ಸೇರಿದ್ದು. ಈಗ ಆಕೆ ತನ್ನ ಮಕ್ಕಳೊಂದಿಗೆ ಬೀದಿಗೆ ಬಂದಿದ್ದಾಳೆ. ಅವಳ ಕಷ್ಟ ನೋಡಲಾರದೆ ನಾನೇ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ಅಸಡ್ಡೆಯಿಂದ ನಕ್ಕರು. ಮಹಿಳೆಗೆ ಅವಮಾನ ಮಾಡುವುದನ್ನು ಸಹಿಸಲಾಗುತ್ತಿಲ್ಲ ಹಾಗಾಗಿ ಎಂಜಿನಿಯರ್ ಮೇಲೆ ಕೈ ಮಾಡಿದ್ದೇನೆ ಎಂದು ಶಾಸಕರು ಹೇಳಿದ್ದಾರೆ. ತಾವು ಮಾಡಿದ್ದಕ್ಕೆ ಪಶ್ಚಾತ್ತಾಪವಿಲ್ಲ, ಯಾವುದೇ ಪರಿಣಾಮ ಎದುರಿಸಲು ಸಿದ್ಧ ಎಂದು ಶಾಸಕಿ ಗೀತಾ ಜೈನ್ ಸ್ಪಷ್ಟಪಡಿಸಿದ್ದಾರೆ.