ವಿಶ್ವ ಶಾಂತಿಗಾಗಿ ಯೋಗ ಅಗತ್ಯ: ಸಚಿವ ಭಗವಂತ ಖೂಬಾ

ಹೊಸದಿಗಂತ ವರದಿ ಬೀದರ್:

ಕಳೆದ 9 ವರ್ಷಗಳಲ್ಲಿ ಸುಮಾರು 180 ದೇಶಗಳು ಭಾರತದ ಯೋಗ ಪದ್ದತಿಯನ್ನು ಅಳವಡಿಸಿಕೊಂಡಿದ್ದು ವಿಶ್ವ ಶಾಂತಿಗಾಗಿ ಯೋಗ ಅಗತ್ಯವಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ಬುಧವಾರದಂದು ಜಿಲ್ಲಾಡಳಿತ ಬೀದರ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ ಇಲಾಖೆ ಹಾಗೂ ವಿವಿಧ ಯೋಗ ಸಂಘ -ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬೀದರ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ವಸುದೈವ ಕುಟುಂಬಕಂ” ಧ್ಯೇಯದೊಂದಿಗೆ ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಶ್ವ ಸಂಸ್ಥೆಯ ಅಂಗಳದಲ್ಲಿ ಆಚರಿಸುತ್ತಿರುವುದು ಭಾರತದ ಪಾಲಿಗೆ ಸಂತಸದ ಸಂಗತಿಯಾಗಿದೆ. ಉತ್ತಮ ಆಹಾರ ಸೇವನೆಯ ಜೊತೆಗೆ ಯೋಗ ಮಾಡುವುದರಿಂದ ಜೀವನದುದ್ದಕ್ಕೂ ಆರೋಗ್ಯವಂತರಾಗಿರಲು ಸಾಧ್ಯವಿದೆ. ಆದ್ದರಿಂದ ಜಾತಿ, ಧರ್ಮ, ಪಂಥ ಎನ್ನದೆ ಎಲ್ಲರೂ ದಿನನಿತ್ಯ ಯೋಗ ಮಾಡಬೇಕೆಂದರು.

ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ ಖಾನ ಮಾತನಾಡಿ, ಯೋಗ ಮಾಡುವದರಿಂದ ಮಾನಸಿಕ ಒತ್ತಡ ಶಮನವಾಗಿ ದಿನದ 24 ಗಂಟೆಯು ನಾವು ಉತ್ಸಾಹದಿಂದಿರಲು ಸಾಧ್ಯ, ಜೊತೆಗೆ ಯೋಗವು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಹೆಚ್ಚಿನ ಮಾನ್ಯತೆ ಸಿಕ್ಕಿದೆ, ಜೊತೆಗೆ ವಿಶ್ವದ ಎಲ್ಲಾ ದೇಶಗಳು ಭಾರತದತ್ತ ತಿರುಗಿ ನೋಡುವಂತಾಗಿದೆ. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಇನ್ನು ಹೆಚ್ಚಿನ ಮಾನ್ಯತೆ ಸಿಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಆಯುಷ ಇಲಾಖೆಯ ಯೋಗ ಪಟು ಆನಂದ ಅವರ ನೇತೃತ್ವದಲ್ಲಿ ಯೋಗ ಪ್ರದರ್ಶನ ನಡೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!