ಮೇಘನಾ ಶೆಟ್ಟಿ, ಶಿವಮೊಗ್ಗ
ದಿನಬೆಳಗಾದರೆ ಮಗುವಿನ ಮೇಲೆ ಪಕ್ಕದ ಮನೆಯಾತ ಅತ್ಯಾಚಾರ , ಚಿಕ್ಕಪ್ಪನಿಂದಲೇ ಮಾನಸಿಕ ಅಸ್ವಸ್ಥ ಅಣ್ಣನ ಮಗಳ ಮೇಲೆ ಅತ್ಯಾಚಾರ, ಚಾಕ್ಲೆಟ್ ಆಸೆ ತೋರಿಸಿ ಒಂದನೇ ತರಗತಿ ಕಂದನ ಮೇಲೆ ಅತ್ಯಾಚಾರ, ಕ್ಯಾಬ್ನಲ್ಲಿ ರೇಪ್, ಬಸ್ನಲ್ಲಿ ರೇಪ್….. ಇಂಥ ಒಂದೆರಡು ಸುದ್ದಿಗಳನ್ನು ಕೇಳಿಯೇ ಇರ್ತೀರಿ.
ದರಿದ್ರ ಮನಸ್ಥಿತಿಗಳನ್ನು ಬದಲಾಯಿಸೋಕೆ ಆ ಸಂದರ್ಭದಲ್ಲಿ ಯಾರಿಗೂ ಸಾಧ್ಯವಿಲ್ಲ, ಹಾಗಾಗಿ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿಕೊಳ್ಳಬೇಕು, ರೇಪಿಸ್ಟ್ಗಳಿಗೆ ಶಿಕ್ಷೆ ಕೊಡಿಸೋದು ಒಂದು ಕಡೆಯಾದ್ರೆ ರೇಪ್ ಆಗದಂತೆ ತಡೆಯೋದು ಇನ್ನೊಂದು ಮುಖ್ಯ ವಿಷಯ.
ಈ ವಿಷಯಗಳ ಬಗ್ಗೆ ಗಮನ ಹರಿಸಿ..
ಲಾಕ್ ಬದಲಾಯಿಸಿ: ಯಾವುದೇ ಹೊಸ ಮನೆಗೆ ಹೋದಾಗ, ಹೊಸ ಊರಿಗೆ ನೀವು ತೆರಳಿದಾಗ ನಿಮ್ಮ ಮನೆಯ ಲಾಕ್ ಬದಲಾಯಿಸಿಕೊಳ್ಳಿ, ನಿಮ್ಮ ಮನೆಯ ಬೀಗ ಯಾರ್ಯಾರ ಬಳಿ ಇದೆಯೋ ಯಾರಿಗೆ ಗೊತ್ತು?
ಮನೆಗೆ ಆಹ್ವಾನಿಸಬೇಡಿ: ಪರಿಚಯ ಇಲ್ಲದ ಯಾವುದೇ ವ್ಯಕ್ತಿಯನ್ನು ಮನೆಗೆ ಆಹ್ವಾನಿಸಬೇಡಿ, ಆತ ಡೆಲಿವರಿ ಹುಡುಗನೇ ಆಗಿರಲಿ, ನೀರು ಕೇಳಲು ಬಂದ ಕೆಲಸದವನೇ ಆಗಿರಲಿ. ಬಾಗಿಲು ತೆಗೆದು ಒಳಕ್ಕೆ ಹೋಗಿ ನೀರು ತರುವ ಗೋಜಿಗೆ ಹೋಗಬೇಡಿ. ಧಿಮಾಕು ಎಂದುಕೊಂಡರೂ ಪರವಾಗಿಲ್ಲ ಕಿಟಕಿಯಿಂದ ವ್ಯವಹರಿಸಿ.
ಜನನಿಬಿಡ ಪ್ರದೇಶಕ್ಕೆ ಹೋಗಿ: ಯಾರಾದರೂ ಅಥವಾ ಗುಂಪು ಫಾಲೋ ಮಾಡ್ತಿದೆ ಎನಿಸಿದಾಗ ಜನನಿಬಿಡ ಪ್ರದೇಶಕ್ಕೆ ಹೋಗಿ ಅಥವಾ ಹತ್ತಿರದ ಪೊಲೀಸ್ ಸ್ಟೇಷನ್ಗೆ ತೆರಳಿ.
ಅಟ್ಯಾಕ್ ಮಾಡಿದರೆ ಏನು ಮಾಡ್ತೀರಿ?: ರಾತ್ರಿ ಸಮಯ ಮನೆಗೆ ನಡೆದುಕೊಂಡು ಹೋಗಬೇಡಿ, ಜನರಿರುವ ಏರಿಯಾಗಳಲ್ಲಿ ನಡೆಯಿರಿ, ನೀವು ಶಕ್ತಿಶಾಲಿಗಳೇ ಆಗಿರಬಹುದು, ಇಬ್ಬರು ಅಥವಾ ಮೂರು ಮಂದಿ ಅಟ್ಯಾಕ್ ಮಾಡಿದರೆ ಏನು ಮಾಡ್ತೀರಿ?
ಪೆಪ್ಪರ್ ಸ್ಪ್ರೇ ಸದಾ ಇರಲಿ: ನಿಮ್ಮ ಬ್ಯಾಗ್ನಲ್ಲಿ ಪೆಪ್ಪರ್ ಸ್ಪ್ರೇ ಸದಾ ಇರಲಿ, ಇದನ್ನು ಬಳಸುವ ಬಗ್ಗೆ ತಿಳಿದುಕೊಳ್ಳಿ. ಯಾರಾದರೂ ಅಟ್ಯಾಕ್ ಮಾಡೋಕೆ ಬಂದರು ಎನಿಸಿದರೆ, ಕೈಯಲ್ಲಿರುವ ವಸ್ತುವಿನಿಂದ ಹಲ್ಲೆ ಮಾಡಿ, ಧ್ವನಿ ಬಳಸಿ ಕೂಗಾಡಿ ಬೇರೆ ಜನರನ್ನು ಸೆಳೆಯಿರಿ.
ಲಿಫ್ಟ್ ಕೊಡುತ್ತೇನೆ ಎಂದರೆ ಒಪ್ಪಬೇಡಿ: ಯಾರೋ ಬಂದು ಲಿಫ್ಟ್ ಕೊಡುತ್ತೇನೆ ಎಂದರೆ ಒಪ್ಪಬೇಡಿ, ಹಗಲು ಹೊತ್ತಾದ್ರೂ ಕೂಡ ಈ ಅಭ್ಯಾಸ ಬೇಡ. ಕಾರ್ನಲ್ಲಿ ಹೋಗುತ್ತಾ ನಿಮ್ಮನ್ನು ಮಾತನಾಡಿಸೋಕೆ ಯಾರಾದ್ರೂ ಬಂದರೆ ತಕ್ಷಣ ಉಲ್ಟಾ ಬಂದ ರಸ್ತೆಗೆ ಹೋಗಲು ಆರಂಭಿಸಿ, ಅವರು ಕಾರ್ ತಿರುಗಿಸಲು ಕಷ್ಟವಾಗುತ್ತದೆ.
ಪರ್ಸ್ನಲ್ಲಿ ಹೆಚ್ಚು ಕ್ಯಾಶ್ ಇಡುವ ಅಭ್ಯಾಸ ಬೇಡ: ಅತಿಯಾದ ಬಂಗಾರ ಹಾಕಿಕೊಂಡು ಓಡಾಡೋದು, ಪರ್ಸ್ನಲ್ಲಿ ಹೆಚ್ಚು ಕ್ಯಾಶ್ ಇಡುವ ಅಭ್ಯಾಸ ಬೇಡ, ಮನೆಗೆ ಇನ್ನೇನು ನಿಮಿಷಗಳಿದೆ ಎನ್ನುವಾಗಲೇ ಕೀ ಕೈಯಲ್ಲಿರಲಿ. ತಕ್ಷಣ ತೆಗೆದು ಲಾಕ್ ಮಾಡಿಕೊಳ್ಳಬಹುದು.
ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸಿ: ನಿಮ್ಮ ಸ್ಕೂಟಿ ಅಥವಾ ಕಾರ್ ಹಾಳಾಗಿದ್ದರೆ, ಅಥವಾ ಯಾವ ಕ್ಷಣಕ್ಕಾದರೂ ಕೈ ಕೊಡುತ್ತದೆ ಎನಿಸಿದರೆ ಅದನ್ನು ರಿಪೇರಿ ಮಾಡಿಸಿ, ಇಲ್ಲವಾದರೆ ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸಿ. ಹಾಳಾಗುವ ಕಾರ್ ಇಟ್ಟುಕೊಂಡು ಓಡಾಡಬೇಡಿ.
ಸೆಲ್ಫ್ ಡಿಫೆನ್ಸ್ ಕ್ಲಾಸ್: ಎಲ್ಲದ್ದಕ್ಕಿಂತ ಮುಖ್ಯವಾಗಿ ಸೆಲ್ಫ್ ಡಿಫೆನ್ಸ್ ಕ್ಲಾಸ್ಗೆ ತೆರಳಿ, ಇದು ನಿಮ್ಮನ್ನು ಕಾಪಾಡುತ್ತದೆ. ಸಂದರ್ಭ ಎಂಥದ್ದೇ ಬರಲಿ, ಅಟ್ಯಾಕ್ ಮಾಡುವಾತನನ್ನು ಹೊಡೆಯುವಷ್ಟು ತಾಕತ್ತು ನಿಮಗೆ ಬರಲಿ. ಕರಾಟೆ ಹಾಗೂ ಸೆಲ್ಫ್ ಡಿಫೆನ್ಸ್ ಕ್ಲಾಸ್ ಆರಂಭಿಸೋಕೆ ವಯಸ್ಸಿನ ಹಂಗಿಲ್ಲ.
ಮನಸ್ಸಿನ ಮಾತನ್ನು ನಂಬಿ: ನಿಮ್ಮ ಮನಸ್ಸಿನ ಮಾತನ್ನು ನಂಬಿ, ಅದು ಯಾವಾಗಲೂ ಸತ್ಯವನ್ನೇ ಹೇಳುತ್ತದೆ. ಯಾವುದೋ ಸಂದರ್ಭದಲ್ಲಿ ಏನೋ ಸರಿಯಾಗುತ್ತಿಲ್ಲ ಅನಿಸಿದರೆ ಬಾಯಿ ಬಿಟ್ಟು ಹೇಳಿ, ಯಾರೋ ಸಮಸ್ಯೆ ತಂದೊಡ್ಡುತ್ತಿದ್ದಾರೆ ಎನಿಸಿದರೆ ಬಾಯಿಬಿಟ್ಟು ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ.
ಆನ್ಲೈನ್ ಲೈಫ್ ಪ್ರೈವೇಟ್ ಆಗಿರಲಿ: ನಿಮ್ಮ ಆನ್ಲೈನ್ ಲೈಫ್ ಪ್ರೈವೇಟ್ ಆಗಿರಲಿ, ಸಿಕ್ಕ ಸಿಕ್ಕ ಮಾಹಿತಿಗಳನ್ನೆಲ್ಲಾ ಅಲ್ಲಿ ಹಂಚಿಕೊಳ್ಳಬೇಡಿ, ಎಲ್ಲಿಗೆ ಹೋಗ್ತೇನೆ, ಪಾರ್ಟಿ ಮಾಡ್ತೇನೆ, ಟ್ರಿಪ್ ಹೋಗ್ತೇನೆ ಈ ಎಲ್ಲ ವಿಷಯಗಳನ್ನು ಹಂಚಿಕೊಳ್ಳಲೇಬೇಕಿಲ್ಲ. ಇದರ ಲಾಭ ಬೇರೆಯವರಿಗಿದೆ.
ನಿಗಾ ಇರಲಿ: ರಸ್ತೆಯಲ್ಲಿ ಹಾಡು ಕೇಳುತ್ತಾ, ಅಥವಾ ಫೋನ್ನಲ್ಲಿ ಮಾತನಾಡುತ್ತಾ ವಾಕ್ ಮಾಡೋದು ಖುಷಿ ಹೌದು, ಆದರೆ ನಿಮ್ಮ ಸುತ್ತಮುತ್ತ ಏನಾಗ್ತಿದೆ ಎನ್ನುವ ಬಗ್ಗೆ ನಿಗಾ ಇರಲಿ. ಕಣ್ಣು, ಕಿವಿ ಹಾಗೂ ಬಾಯಿ ತೆರೆದಿರಲಿ.
ಇವೆಲ್ಲವೂ ತಯಾರಿ ಅಷ್ಟೆ, ಆ ಸಂದರ್ಭ ನಿಜಕ್ಕೂ ಎದುರಾದಾಗ ಏನು ಮಾಡಬೇಕು ಎಂದು ತಕ್ಷಣಕ್ಕೆ ಆಲೋಚಿಸಿ, ಒಬ್ಬರ ಸಂದರ್ಭ ಒಬ್ಬರಿಗಿಂತ ಭಿನ್ನ ಇರಬಹುದು. ನಾನು ಸೇಫ್ ಆಗಿದ್ದೇನೆ ನನ್ನ ಮೇಲೆ ಯಾರೂ ಕೆಟ್ಟ ಕಣ್ಣಿಟ್ಟಿಲ್ಲ ಎಂದು ನೀವು ಅಂದುಕೊಳ್ಳಬಹುದು, ಆದರೆ ಅದೇ ನೂರಕ್ಕೆ ನೂರು ಸತ್ಯ ಎಂದು ನಿಮಗೆ ತಿಳಿದಿಲ್ಲ. ಸದಾ ಅಲರ್ಟ್ ಆಗಿರಿ, ಯಾವುದೇ ಸಂದರ್ಭ ಬಂದಾಗಲೂ ಧೈರ್ಯದಿಂದ ಎದುರಿಸಿ.