ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ರಾಜ್ಯದ ನಲ್ಬರಿ ಜಿಲ್ಲೆಯಲ್ಲಿ ಭೀಕರ ಪ್ರವಾಹ ಎದುರಾಗಿದೆ. ಜಿಲ್ಲೆಯ 6 ಕಂದಾಯ ವೃತ್ತಗಳಲ್ಲಿ ಸುಮಾರು 45,000 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಮತ್ತು 108 ಹಳ್ಳಿಗಳು ಜಲಾವೃತಗೊಂಡಿವೆ.
ಮೊಯಿರಾರಂಗ, ಬಟಗಿಲ ಗ್ರಾಮದ 200ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರಾಗಿದ್ದಾರೆ.
ಅಸ್ಸಾಂ ಮತ್ತು ನೆರೆಯ ದೇಶ ಭೂತಾನ್‌ನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಪಗ್ಲಾಡಿಯಾ ನದಿಯ ನೀರಿನ ಮಟ್ಟವು ಅಪಾಯ ಅಂಚನ್ನು ತಲುಪಿದೆ. ಜಿಲ್ಲೆಯ ಘೋಗ್ರಾಪರ್, ತಿಹು, ಬರ್ಭಾಗ್ ಮತ್ತು ಧಮ್‌ಧಾಮ ಪ್ರದೇಶದ ಸುಮಾರು 90 ಗ್ರಾಮಗಳು ಪ್ರವಾಹದಲ್ಲಿ ಸಿಲುಕಿವೆ. ಸಾವಿರಾರು ಗ್ರಾಮಸ್ಥರು ನಿರಾಶ್ರಿತರಾಗಿದ್ದಾರೆ.
ನಲ್ಬರಿ ಜಿಲ್ಲೆಯಲ್ಲಿ 44,707 ಜನರು ಸಂತ್ರಸ್ತರಾಗಿದ್ದಾರೆ. ಬಕ್ಸಾದಲ್ಲಿ 26,571 ಜನರು, ಲಖಿಂಪುರದಲ್ಲಿ 25096 ಜನರು, ತಮುಲ್ಪುರದಲ್ಲಿ 15610 ಜನರು, ಬಾರ್ಪೇಟಾ ಜಿಲ್ಲೆಯಲ್ಲಿ 3840 ಜನರು ಪ್ರವಾಹದಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. 1.07 ಲಕ್ಷಕ್ಕೂ ಹೆಚ್ಚು ಸಾಕುಪ್ರಾಣಿಗಳು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿವೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಬುಧವಾರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಂದ 1280 ಜನರನ್ನು ಸ್ಥಳಾಂತರಿಸಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.