ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ಅಮೆರಿಕ ಭೇಟಿ ಅತ್ಯಂತ ಮಹತ್ವದ್ದಾಗಿದ್ದು,ಉಭಯ ದೇಶಗಳ ನಡುವಣ ಬಾಂಧವ್ಯ ಸಮಗ್ರ ನೆಲೆಯಲ್ಲಿ ಹೊಸ ಎತ್ತರಕ್ಕೇರುವಂತೆ ಮಾಡಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಈಗಾಗಲೇ ಭಾರತೀಯ ವಾಯುಪಡೆಗಾಗಿ ಜೆಟ್ ಇಂಜಿನ್ಗಳ ನಿರ್ಮಾಣಕ್ಕಾಗಿ ಎಚ್ಎಎಲ್ ಮತ್ತು ಜಿಇ ಏರೋಸ್ಪೇಸ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರ ಜೊತೆಗೆ ಬೆಂಗಳೂರು ಮತ್ತು ಅಹಮ್ಮದಾಬಾದ್ಗಳಲ್ಲಿ ಅಮೆರಿಕದ ಎರಡು ಕಾನ್ಸುಲೇಟ್ ಜನರಲ್ಗಳ ಸ್ಥಾಪನೆ, ಸಿಯಾಟಲ್ನಲ್ಲಿ ಭಾರತದ ಬಾಹ್ಯಾಕಾಶ ಮಿಷನ್ ಸ್ಥಾಪನೆ, ಜಂಟಿ ಮಾನವಸಹಿತ ಬಾಹ್ಯಾಕಾಶಯಾನ , ಸೆಮಿಕಂಡಕ್ಟರ್ ತಂತ್ರಜ್ಞಾನ, ಟೆಲಿಕಮ್ಯುನಿಕೇಶನ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೂಡ ಮಹತ್ವದ ಒಪ್ಪಂದಗಳು ನಡೆಯಲಿರುವುದು ಮೋದಿಯವರ ಭೇಟಿಯನ್ನು ಅತ್ಯಂತ ಪ್ರಭಾವಿಯನ್ನಾಗಿಸಿದೆ.
ದಿಲ್ಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಅಮೆರಿಕ ವಿಶ್ವದಲ್ಲಿ ಹೊಂದಿರುವ ಅತ್ಯಂತ ದೊಡ್ಡ ರಾಜತಾಂತ್ರಿಕ ಮಿಷನ್ಗಳಲ್ಲಿ ಒಂದಾಗಿದೆ .ಅಲ್ಲದೆ ಮುಂಬೈ, ಕೊಲ್ಕತಾ, ಚೆನ್ನೈ, ಹೈದರಾಬಾದ್ಗಳಲ್ಲಿ ನಾಲ್ಕು ಕಾನ್ಸುಲೇಟ್ಗಳನ್ನು ಹೊಂದಿದ್ದರೆ, ಭಾರತವು ಅಮೆರಿಕದ ನ್ಯೂಯಾರ್ಕ್, ಸಾನ್ಫ್ರಾನ್ಸಿಸ್ಕೋ, ಚಿಕಾಗೋ, ಹೂಸ್ಟನ್, ಅಟ್ಲಾಂಟಾಗಳಲ್ಲಿ ಕಾನ್ಸುಲೇಟ್ಗಳನ್ನು ಹೊಂದಿದೆ.ಅಲ್ಲದೆ ವಾಷಿಂಗ್ಟನ್ನಲ್ಲಿ ರಾಯಭಾರ ಕಚೇರಿಯನ್ನೂ ಹೊಂದಿದೆ.
ಭಾರತೀಯರಿಗೆ ನೆರವಾಗುವ ಹೊಸ ವೀಸಾ ನಿಯಮ
ಅಮೆರಿಕವು ಈಗ ಎಚ್-೧ಬಿ ವೀಸಾಗಳನ್ನು ದೇಶದಲ್ಲಿಯೇ ನವೀಕರಣಗೊಳಿಸಲು ಅವಕಾಶ ನೀಡುವ ಹೊಸ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಇದು ಅತ್ಯಂತ ಮಹತ್ವದ ನಿರ್ಧಾರವಾಗಿದ್ದು, ಇದರಿಂದ ಅಮೆರಿಕದಲ್ಲಿರುವ ಸಾವಿರಾರು ಮಂದಿ ಭಾರತೀಯ ವೃತ್ತಿಪರರಿಗೆ ನೆರವಾಗಲಿದೆ. ಈ ಭಾರತೀಯರು ಇನ್ನು ಮುಂದೆ ತಮ್ಮ ಕೆಲಸದ ವೀಸಾಗಳ ನವೀಕರಣಕ್ಕಾಗಿ ದೇಶದಿಂದ ಹೊರಗೆ ಹೋಗಿ ಬರಬೇಕಾದ ಕಿರಿಕಿರಿ ಇಲ್ಲದೆ ದೇಶದೊಳಗೆಯೇ ಇದ್ದು ತಮ್ಮ ಕೆಲಸವನ್ನು ಮುಂದುವರಿಸಬಹುದಾಗಿದೆ .ಅಮೆರಿಕ ಕಳೆದ ವರ್ಷ 1,25,000ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನೀಡಿದ್ದು, ಕಳೆದ ಒಂದು ವರ್ಷದಲ್ಲೇ ಶೇ.20ರಷ್ಟು ಅಧಿಕ ವೀಸಾ ನೀಡಿದ್ದು ಒಂದು ದಾಖಲೆಯಾಗಿದೆ.
2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ಗೆ ಜಂಟಿ ಮಾನವ ಮಿಷನ್ಗಾಗಿ ನಾಸಾ ಮತ್ತು ಇಸ್ರೋ ನಡುವೆ ಒಪ್ಪಂದಕ್ಕೆ ಸಿದ್ಧತೆ ನಡೆದಿದೆ ಎಂದು ಶ್ವೇತಭವನ ಹೇಳಿದೆ.
ಈ ಜಂಟಿ ಮಿಷನ್ ಬಾಹ್ಯಾಕಾಶ ಪರಿಶೋಧನೆ ಸಮಗ್ರ ಮನುಕುಲಕ್ಕೆ ಪ್ರಯೋಜನ ನೀಡಲಿದೆ. ಹಾಗೆಯೇ ನಾಸಾ ಮತ್ತು ಇಸ್ರೋಗಳು ಈ ವರ್ಷ “ಹ್ಯೂಮನ್ ಸ್ಪೇಸ್ಫ್ಲೈಟ್ ಆಪರೇಶನ್”ಗಳಿಗಾಗಿ ವ್ಯೂಹಾತ್ಮಕ ಚೌಕಟ್ಟೊಂದನ್ನು ಅಭಿವೃದ್ಧಿಪಡಿಸಲಿವೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಗುಜರಾತಿನಲ್ಲಿ ಸೆಮಿಕಂಡಕ್ಟರ್ ಪರೀಕ್ಷೆ ಮತ್ತು ಜೋಡಣೆಯ ಸೌಲಭ್ಯ ಸ್ಥಾಪನೆಗಾಗಿ 2.75 ಬಿ.ಡಾ.ವೆಚ್ಚದ ಹೂಡಿಕೆಗೆ ಒಪ್ಪಂದ ಏರ್ಪಡಲಿದೆ.ಭಾರತೀಯ ರಾಷ್ಟ್ರೀಯ ಸೆಮಿಕಂಡಕ್ಟರ್ ಮಿಷನ್ ನೆರವಿನೊಂದಿಗೆ ಮೈಕ್ರಾನ್ ಟೆಕ್ನಾಲಜಿಯು800ಮಿ.ಡಾ.ಹೂಡಿಕೆ ಮಾಡಲಿದ್ದು, ಭಾರತ ಸರಕಾರದ ಸಂಬಂತ ಇಲಾಖೆ ಇನ್ನಷ್ಟು ಆರ್ಥಿಕ ಬೆಂಬಲ ನೀಡಲಿದೆ. ಅಲ್ಲದೆ ಇನ್ನೊಂದು ಸೆಮಿಕಂಡಕ್ಟರ್ ಉತ್ಪಾದನಾ ಸಾಧನ ಕಂಪೆನಿಯು 60000ಭಾರತೀಯ ಇಂಜಿನಿಯರ್ಗಳಿಗೆ ವಿಶೇಷ ತರಬೇತಿ ಯೋಜನೆಯೊಂದನ್ನು ಘೋಷಿಸಲಿದೆ.
೫ಜಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೂಡ ಉಭಯ ದೇಶಗಳು ಹೆಚ್ಚಿನ ಸಹಕಾರ ಹೊಂದಲಿದ್ದು, ಭಾರತದ ೫ಜಿ ಮತ್ತು ೬ಜಿ ಯೋಜನೆಯಲ್ಲೂ ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಲಿವೆ .
ಹಾಗೆಯೇ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ, ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ)ಕ್ಷೇತ್ರದಲ್ಲಿ ಅಮೆರಿಕದ ಅಸೋಸಿಯೇಶನ್ ಆಫ್ ಅಮೆರಿಕನ್ ಯುನಿರ್ವಸಿಟೀಸ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ಗಳು ಯುನಿರ್ವಸಿಟಿ ನೆಟ್ವರ್ಕ್ನ್ನು ಆರಂಭಿಸಲಿದ್ದು, ಹೊಸ ಸಂಶೋಧನೆ,ವಿನಿಮಯ ಕ್ಷೇತ್ರದಲ್ಲಿ ಜಾಗತಿಕ ಸವಾಲುಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಪಾಲುದಾರಿಕೆಯೊಂದಿಗೆ ಕೆಲಸ ಮಾಡಲಿವೆ. ಕೃತಕ ಬುದ್ಧಿಮತ್ತೆ , ಅಡ್ವಾನ್ಸ್ಡ್ ಅಂಡ್ ಕ್ವಾಂಟಮ್ ಟೆಕ್ನಾಲಜೀಸ್ಗಳಿಗೆ ಸಂಬಂಧಿಸಿಯೂ ಒಪ್ಪಂದ ಏರ್ಪಡಲಿದೆ.