ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಸರ್ಕಾರವು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ ದೇಶ ಇಬ್ಬಾಗವಾಗಬಹುದು ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಎಚ್ಚರಿಕೆ ನಿಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸದಲ್ಲಿರುವ ವೇಳೆ ಒಬಾಮಾ ಈ ಹೇಳಿಕೆ ನೀಡಿದ್ದು, ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರಸ್ತಾಪಿಸಬೇಕೆಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಸೂಚಿನೆ ನೀಡಿದ್ದಾರೆ.
ಸಿಎನ್‌ಎನ್ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಒಬಾಮಾ ಈ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ‘ನಾನು ಅಮೆರಿಕದ ಅಧ್ಯಕ್ಷನಾಗಿದ್ದಾಗ ಪ್ರಧಾನಿ ಮೋದಿ ನನಗೆ ಚೆನ್ನಾಗಿ ಪರಿಚಯವಿದ್ದರು. ಒಂದು ವೇಳೆ, ನಾನೀಗ ಅವರೊಂದಿಗೆ ಮಾತುಕತೆ ನಡೆಸಿದ್ದರೆ, ಭಾರತದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿಯ ಕುರಿತು ಚರ್ಚೆ ಕೈಗೊಳ್ಳುತ್ತಿದ್ದೆ’ ಎಂದು ಹೇಳಿದ್ದಾರೆ.
‘ಮೋದಿಯವರಿಗೆ, ನೀವು ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ, ಒಂದು ಹಂತದಲ್ಲಿ ಭಾರತವು ಇಬ್ಭಾಗವಾಗುವ ಸಾಧ್ಯತೆಯಿದೆ. ಇದು ನನ್ನ ವಾದದ ಪ್ರಮುಖ ಅಂಶವಾಗಿರುತ್ತಿತ್ತು’ ಎಂದು ಒಬಾಮಾ ತಿಳಿಸಿದ್ದಾರೆ.
‘ಅಧ್ಯಕ್ಷ ಬೈಡನ್ ಹಾಗೂ ಪ್ರಧಾನಿ ಮೋದಿ ಭೇಟಿ ವೇಳೆ, ಭಾರತದಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಸ್ತಾಪವಾಗಬೇಕು. ಬಹುಸಂಖ್ಯಾತ ಹಿಂದೂ ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಯಾಗಬೇಕು. ಅದು ಉಲ್ಲೇಖಿಸಬೇಕಾದ ಸಂಗತಿಯಾಗಿದೆ. ಅಂತಹ ದೊಡ್ಡ ಆಂತರಿಕ ಸಂಘರ್ಷಗಳು ಪ್ರಾರಂಭಿಸಿದಾಗ ಏನಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಹಾಗಾಗಿ ಈ ತಾರತಮ್ಯ ಕೇವಲ ಮುಸ್ಲಿಮರ ಹಿತಾಸಕ್ತಿಗಳಿಗೆ ಮಾತ್ರವಲ್ಲದೆ ಹಿಂದೂ ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುತ್ತದೆ’ ಎಂದಿದ್ದಾರೆ.