ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಹೊಸ ಜಾಗತಿಕ ಹಣಕಾಸು ಒಪ್ಪಂದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಆಗಮಿಸಿದ್ದಾರೆ.
ಈ ಕುರಿತ ವಿಡಿಯೋವನ್ನು ಪಾಕಿಸ್ತಾನದ ಪ್ರಧಾನಿ ಕಚೇರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಗೊಂಡಿದ್ದು, ಅದನ್ನು ನೋಡಿದ ಅನೇಕರು ಷರೀಫ್ ಅವರ ವರ್ತನೆ ಟೀಕಿಸಿದ್ದಾರೆ.
ವೀಡಿಯೊದಲ್ಲಿ, ಶೆಹಬಾಜ್ ಷರೀಫ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ಯಾರಿಸ್‌ನ ಪಲೈಸ್ ಬ್ರೋಗ್ನಿಯರ್ಟ್‌ಗೆ ಆಗಮಿಸಿದ್ದು, ಈ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬರುತ್ತಿತ್ತು. ಈ ಸಮಯದಲ್ಲಿ ಪ್ರೊಟೋಕಾಲ್‌ನಲ್ಲಿದ್ದ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಛತ್ರಿಯನ್ನು ಹಿಡಿದು ಪಾಕ್ ಪ್ರಧಾನಿಗೆ ಸಹಾಯ ಮಾಡಿದರು. ಆಕೆಯೊಂದಿಗೆ ಕೆಲ ಹೊತ್ತು ಮಾತನಾಡುತ್ತಲೇ ಮುಂದೆ ಬರುವ ಷರೀಫ್, ಸ್ವಲ್ಪ ನಿಂತು ಏನನ್ನೋ ಹೇಳಿದ್ದಾರೆ. ಬಳಿಕ ಆಕೆಯ ಕೈಯಲ್ಲಿದ್ದ ಛತ್ರಿಯನ್ನು ತಾವೇ ಹಿಡಿದುಕೊಂಡು ಮುಂದೆ ಹೋಗಿದ್ದಾರೆ.
ಪಾಕ್ ಪ್ರಧಾನಿ ಷರೀಫ್, ಛತ್ರಿ ಹಿಡಿದು ಮುಂದೆ ಹೋಗುತ್ತಿದ್ದರೆ, ಭಾರೀ ಮಳೆಯ ನಡುವೆ ಮಹಿಳಾ ಅಧಿಕಾರಿ ನೆನೆದುಕೊಂಡೇ ಅವರ ಹಿಂದೆ ಬರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ವಿಡಿಯೋವನ್ನು ಪ್ರಧಾನಿ ಕಚೇರಿ ಹಂಚಿಕೊಂಡ ಬಳಿಕ ಪರ ವಿರೋಧದ ಚರ್ಚೆಗಳು ಆರಂಭವಾಗಿದೆ. ಕೆಲವರು ಪಾಕ್ ಪ್ರಧಾನಿಯ ವರ್ತನೆ ಮುಜುಗರ ತರುವಂಥದ್ದು ಎಂದಿದ್ದಾರೆ. ಅದರಲ್ಲೂ ಕೆಲವು ಪಾಕಿಸ್ತಾನ ಪ್ರಧಾನಿ ಸ್ವಲ್ಪ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ತಿಳಿಸಿದ್ದಾರೆ.