ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಸೀಸನ್ 9 ಗೆದ್ದ ರೂಪೇಶ್ ಶೆಟ್ಟಿ ನಟಿಸಿರುವ ಹೊಸ ತುಳು ಸಿನಿಮಾ ‘ಸರ್ಕಸ್ ‘ ಜೂ.23ಕ್ಕೆ ಬಿಡುಗಡೆ ಆಗಿದ್ದು, ಬಿಡುಗಡೆ ಆದ ಮೊದಲ ದಿನವೇ ತುಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಈ ವರೆಗೆ ಮೊದಲ ದಿನ ಅತಿ ಹೆಚ್ಚು ಜನ ನೋಡಿದ, ಅತಿ ಹೆಚ್ಚು ಕಲೆಕ್ಷನ್ ಮಾಡಿದ ತುಳು ಸಿನಿಮಾ ಎಂಬ ಖ್ಯಾತಿಗೆ ಸರ್ಕಸ್ ಸಿನಿಮಾ ಪಾತ್ರವಾಗಿದೆ. ಬಿಡುಗಡೆ ಆದ ದಿನವೇ ಸರ್ಕಸ್ ಸಿನಿಮಾವನ್ನು 12500 ಮಂದಿ ನೋಡಿದ್ದು, ತುಳು ಚಿತ್ರರಂಗದಲ್ಲಿ ದಾಖಲೆ ಬರೆದಿದೆ.
‘ಸರ್ಕಸ್ ‘ ಸಿನಿಮಾ ಕರಾವಳಿ ಜಿಲ್ಲೆಯ ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ ದುಬೈ, ಬಹ್ರೆಸ್ ಸೇರಿದಂತೆ ಕೆಲವು ಗಲ್ಫ್ ದೇಶಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಿದೆ. ಕೆಲವೆಡೆ ಸಿನಿಮಾದ ವಿಶೇಷ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು. ಸಿನಿಮಾ ನೋಡಿದ ತುಳು ಪ್ರೇಕ್ಷಕರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡು ಕೊಂಡಾಡಿದ್ದಾರೆ. ಸಿನಿಮಾ ಬಿಡುಗಡೆ ಆಗುವ ಮುನ್ನ ಸಿನಿಮಾದ 51 ವಿಶೇಷ ಪ್ರದರ್ಶನಗಳನ್ನು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ರೂಪೇಶ್ ಶೆಟ್ಟಿ ಆಯೋಜಿಸಿದ್ದರು. ವಿದೇಶಗಳಲ್ಲಿಯೂ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. .
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ತಮ್ಮ ಖುಷಿ ಹಂಚಿಕೊಂಡಿರುವ ರೂಪೇಶ್ ಶೆಟ್ಟಿ,’ಸರ್ಕಸ್ ಈ ರೇಂಜ್ಗೆ ಹಿಟ್ ಆಗತ್ತೆ ಎಂದು ಭಾವಿಸಿರಲಿಲ್ಲ. ತುಳು ಚಿತ್ರರಂಗದಲ್ಲಿ ಈ ಚಿತ್ರ ದಾಖಲೆ ಬರೆದಿದೆ. ಮೊದಲ ದಿನ 12,500 ಜನರು ಈ ಚಿತ್ರ ನೋಡಿದ್ದಾರೆ. ತುಳು ಚಿತ್ರರಂಗದ ದೊಡ್ಡ ಓಪನಿಂಗ್ ಪಡೆದ ಸಿನಿಮಾ. ಬುಕ್ ಮೈ ಶೋನಲ್ಲಿ 9.9 ರೇಟಿಂಗ್ ಸಿಕ್ಕಿದೆ. ಈ ಗೆಲುವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ” ಎಂದಿದ್ದಾರೆ ಜೊತೆಗೆ ಕೆಲವು ಮನವಿಗಳನ್ನೂ ಮಾಡಿದ್ದು, ‘ಎಲ್ಲರೂ ಮೊದಲ ವಾರವೇ ಸಿನಿಮಾವನ್ನು ನೋಡಿ. ಎರಡನೇ ವಾರ ನಿರ್ಮಾಪಕರಿಗೆ ಬರುವ ಲಾಭಾಂಶ ಕಡಿಮೆ ಆಗುತ್ತದೆ. ಹಾಗೂ ಸಿನಿಮಾ ನೋಡುವ ವೇಳೆ ಯಾರೂ ಸಹ ಚಿತ್ರಮಂದಿರದಿಂದ ಲೈವ್ ಮಾಡಬೇಡಿ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.