ಹೊಸ ದಿಗಂತ ವರದಿ , ಶಿವಮೊಗ್ಗ:
ನಗರದ ಖಾಸಗಿ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ಕೃತಕ ವಾತಾವರಣ ನಿರ್ಮಿಸಿ, ವಾಸವಾಗಿದ್ದ ಬಾಡಿಗೆ ಮನೆಯಲ್ಲಿಯೇ ಗಾಂಜಾ ಬೆಳೆಯಲು ಮುಂದಾಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಎಂಬಿಬಿಎಸ್ ವಿದ್ಯಾರ್ಥಿಗಳೇ ಗಾಂಜಾ ಬೆಳೆಯುತ್ತಿರುವುದು ಹಾಗೂ ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಬೇಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್ ಶನಿವಾರ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿ, ನಗರದ ಪುರಲೆ ಸುಬ್ಬಯ್ಯ ಮೆಡಿಕಲ್ ಕಾಲೇಜು ಹತ್ತಿರದ ಶಿವಗಂಗಾ ಲೇ ಔಟ್ನಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಈ ವಿದ್ಯಾರ್ಥಿಗಳು ವಾಸವಾಗಿದ್ದರು. ಇವರುಗಳು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದಾಗ ಕೃತಕ ವಾತಾವರಣದಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
ತಮಿಳುನಾಡು ಕೃಷ್ಣಗಿರಿ ಜಕ್ಕಪ್ಪ ನಗರದ ವಿಘ್ನರಾಜ್ (28), ಕೇರಳ ರಾಜ್ಯದ ಇಡ್ಡುಕ್ಕಿ ಜಿಲ್ಲೆ ಅಡಿಮಲೆ ಟೌನ್ ನಿವಾಸಿ ವಿನೋದ್ ಕುಮಾರ್(27) ಹಾಗೂ ತಮಿಳುನಾಡು ಧರ್ಮಪುರಿ ಜಿಲ್ಲೆ ಕಡಗತ್ತೂರು ಪಟ್ಟಣದ ಪಾಂಡಿದೊರೈ(27) ಇವರುಗಳನ್ನು ಬಂಧಿಸಲಾಗಿದೆ. ಇದರಲ್ಲಿ ವಿಘ್ನರಾಜ್ ತನ್ನ ವಾಸದ ಬಾಡಿಗೆ ಮನೆಯಲ್ಲಿ ಕೃತಕವಾಗಿ ಗಾಂಜಾ ಬೆಳೆದಿರುವುದು ಹಾಗೂ ಇನ್ನೂ ಇಬ್ಬರು ಖರೀದಿಸಲು ಬಂದಿರುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.