2023 ನೇ ಸಾಲಿನ ವಿಎಸ್‌ಕೆ ಮಾಧ್ಯಮ ಪ್ರಶಸ್ತಿ ಪ್ರದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯದ ಸುದ್ದಿ ಸಂವಹನ ಸಂಸ್ಥೆ ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವರ್ಷಂಪ್ರತಿ ನಾರದ ಜಯಂತಿಯ ಪ್ರಯುಕ್ತ ಪತ್ರಕರ್ತರಿಗೆ ನೀಡುವ ವಿಎಸ್‌ಕೆ ಮಾಧ್ಯಮ ಪ್ರಶಸ್ತಿಯ 2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ಇಂದು ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಶ್ರೀನಿವಾಸ ಬಳ್ಳಿ, ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ಸಮಾಜದಲ್ಲಿ ಆರೋಗ್ಯಕರ ವಾತಾವರಣವನ್ನು ಮೂಡಿಸುವ ಅಸ್ತ್ರವಾಗಬೇಕಿತ್ತು. ಆದರೆ ಪ್ರಸ್ತುತ ಅದು ಧಾವಂತದಿಂದಾಗಿ ಅನೇಕ ವೈಪರಿತ್ಯಕ್ಕೆ ಎಡೆ ಮಾಡಿಕೊಡುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಆದರ್ಶ ಪ್ರಧಾನವಾಗಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಪತ್ರಕರ್ತರು ಪ್ರಶಸ್ತಿಗಾಗಿಯೋ, ಪ್ರಶಂಸೆಗಾಗಿಯೋ ಕೆಲಸ ಮಾಡುವುದಕ್ಕಿಂತ ಒಳ್ಳೆಯ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುವುದನ್ನು ತನ್ನ ಧ್ಯೇಯವೆಂದು ಭಾವಿಸಿ ಕಾರ್ಯನಿರ್ವಹಿಸುವವರಿಂದ ಸಮಾಜ ಕಟ್ಟುವ ಕೆಲಸವಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಉಳಿಯಬೇಕಾಗಿರುವುದು ಮೌಲ್ಯವೇ ಆಗಿದೆ ಎಂದರು.

ಈ ಬಾರಿ ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿಯನ್ನು ಹೊಸದಿಗಂತದ ಅಂಕಣಕಾರ ಹೆಬ್ರಿ ಬಾಲಕೃಷ್ಣ ಮಲ್ಯ, ತಿ.ತಾ.ಶರ್ಮಾ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪ್ರಜಾವಾಣಿಯ ರವಿಪ್ರಕಾಶ್ ಎಸ್, ಸುವರ್ಣ ವಾಹಿನಿಯ ಜಯಪ್ರಕಾಶ್ ಶೆಟ್ಟಿ, ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಶಿವಮೊಗ್ಗದ ಅಜೇಯ ಪತ್ರಿಕೆಯ ಸಂಪಾದಕ ಎಂ. ಶ್ರೀನಿವಾಸನ್, ವಿಕ್ರಮ ವಾರಪತ್ರಿಕೆಯ ಅಂಕಣಕಾರ ಕಾ. ರಮಾನಂದ ಆಚಾರ್ಯ, ವಿ.ಎಸ್.ಕೆ. ಡಿಜಿಟಲ್ ಮಾಧ್ಯಮ ಪ್ರಶಸ್ತಿಯನ್ನು ಮೀಡಿಯಾ ಮಾಸ್ಟರ್ಸ್ ಸಂಪಾದಕ ಎಂ. ಎಸ್. ರಾಘವೇಂದ್ರ ಸ್ವೀಕರಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ವಿಶ್ವ ಸಂವಾದ ಕೇಂದ್ರದ ಅಧ್ಯಕ್ಷ ಡಾ.ಶ್ರೀಧರ್ ಉಪಸ್ಥಿತರಿದ್ದರು. ಚಿಂತಕರು, ಅಂಕಣಕಾರರು, ಲೇಖಕರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!