ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆರೆಯಲ್ಲಿ ಮೀನು ಹಿಡಿಯಲು ಹೋಗಿರುವ ವೇಳೆ ತೆಪ್ಪ ಮಗುಚಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಾರನಾಳ ಕೆರೆಯಲ್ಲಿ ನಡೆದಿದೆ.
ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಸೋಮವಾರ ಮುಂಜಾನೆ ಶವ ಪತ್ತೆಯಾಗಿದೆ.
ಮಂಜುನಾಥ ಶಿವಪ್ಪ ಚಲವಾದಿ (17) ಮತ್ತು ಇನ್ನೊಬ್ಬ ಯುವಕ ಮನೆಯವರಿಗೆ ತಿಳಿಸದೆ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ತೆಪ್ಪ ಬಳಸಿ ಮೀನು ಹಿಡಿಯಲು ಮುಂದಾಗಿದ್ದಾರೆ. ಆದರೆ ತೆಪ್ಪ ಪಲ್ಟಿಯಾದ ಪರಿಣಾಮ ಯುವಕರು ನೀರಿಗೆ ಬಿದ್ದಿದ್ದಾರೆ. ಅದನ್ನು ಗಮನಿಸಿದ
ದಾರಿಹೋಕರೊಬ್ಬರು ಕೂಡಲೇ ನೀರಿಗೆ ಧುಮುಕಿ ಒಬ್ಬ ಯುವಕನನ್ನು ರಕ್ಷಣೆ ಮಾಡಿದ್ದಾರೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಮಂಜುನಾಥ ಶಿವಪ್ಪ ಚಲವಾದಿ ಮನೆಯವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕತ್ತಲು ಆವರಿಸಿದ್ದ ಕಾರಣ ಮೃತದೇಹ ಹುಡುಕಾಟಕ್ಕೆ ಅಡ್ಡಿಯಾಗಿದೆ. ಆದರೆ ಇಂದು ಬೆಳಗ್ಗೆ ಯುವಕನ ಶವ ಹೊರತೆಗೆಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.
ತಾರನಾಳ ಕೆರೆ ದಂಡೆ ಮೇಲೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.