ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಿಯೋ ಚಿತ್ರದಲ್ಲಿನ ನಾ ರೆಡಿ ಹಾಡಿನಲ್ಲಿ ಡ್ರಗ್ಸ್ ಸೇವನೆ ಮತ್ತು ರೌಡಿಸಂ ಅನ್ನು ಉತ್ತೇಜಿಸಲಾಗಿದೆ ಎಂದು ಆರೋಪಿಸಿ ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚೆನ್ನೈನ ಸಾಮಾಜಿಕ ಕಾರ್ಯಕರ್ತರೊಬ್ಬರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಈ ಹಾಡು ಮಾದಕ ಸೇವನೆಯನ್ನು ಉತ್ತೇಜಿಸುತ್ತಿರುವುದರಿಂದ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಕೋರಿದ್ದಾರೆ.
ಲಿಯೋ ಚಿತ್ರದಲ್ಲಿನ ನಾ ರೆಡಿ ಹಾಡಿನಲ್ಲಿ ನಟ ವಿಜಯ್ ಸಿಗರೇಟ್ ಹಿಡಿದುಕೊಂಡು ನೃತ್ಯ ಮಾಡುವ ದೃಶ್ಯಗಳಿವೆ. ಹಾಗಾಗಿ ನಟ ವಿಜಯ್ ವಿರುದ್ಧ ಮಾದಕ ದ್ರವ್ಯ ತಡೆ ಕಾಯ್ದೆಯ ಸೆಕ್ಷನ್ ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ಇದನ್ನು ಬೆಂಬಲಿಸಿ ಹಾಡು ಬಿಡುಗಡೆ ಮಾಡಿದವರ ವಿರುದ್ಧವೂ ಕಾನೂನು ಪ್ರಕಾರ ಪ್ರಕರಣ ದಾಖಲಿಸಬೇಕು ಎಂದು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆನ್ಲೈನ್ ದೂರು ದಾಖಲಿಸಿದ್ದಾರೆ.
ಡ್ರಗ್ಸ್ನ್ನು ಬೆಂಬಲಿಸುವವರ ವಿರುದ್ಧ ಮತ್ತು ಡ್ರಗ್ಸ್ ತಡೆಗಟ್ಟುವಲ್ಲಿ ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಇತ್ತೀಚಿಗಷ್ಟೇ ಹೇಳಿದ್ದರು.
ಜೂನ್ 22ರಂದು ಬಿಡುಗಡೆಯಾದ ಈ ಹಾಡು ಕೇವಲ ಮೂರು ದಿನಗಳಲ್ಲಿ 28 ಮಿಲಿಯನ್ ವೀಕ್ಷಣೆ ಕಂಡಿದೆ. ಬಹುನಿರೀಕ್ಷಿತ ಈ ತಮಿಳು ಚಲನಚಿತ್ರವು ಈ ವರ್ಷ ಅಕ್ಟೋಬರ್ 19ರಂದು ತೆರೆ ಕಾಣಲಿದೆ.