ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಚುನಾವಣೆಯಲ್ಲಿ ‘ವ್ಯಾಗ್ನರ್ ಗುಂಪು( ವಿರೋಧ ಪಕ್ಷಗಳು)’ ಅಹಿಂಸೆಯ ಮಾರ್ಗವನ್ನು ಬಳಸಿಕೊಂಡು ಮತದಾನದ ಮೂಲಕ ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಶಿವಸೇನೆ(ಯುಬಿಟಿ) ಸೋಮವಾರ ಹೇಳಿದೆ.
ಶಿವಸೇನೆ ಸೇನಾ(UBT) ಮುಖವಾಣಿ ‘ಸಾಮ್ನಾ’ ತನ್ನ ಸಂಪಾದಕೀಯದಲ್ಲಿ ವ್ಯಾಗ್ನರ್ ಗುಂಪಿನ “ರಷ್ಯಾದ ಅಧ್ಯಕ್ಷ ಪುಟಿನ್ ವಿರುದ್ಧದ ದಂಗೆ” ಮತ್ತು ಕಳೆದ ವಾರ ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯನ್ನು ಉಲ್ಲೇಖಿಸಿದೆ.
ಪಾಟ್ನಾದಲ್ಲಿ ಹನ್ನೆರಡಕ್ಕೂ ಹೆಚ್ಚು ವಿರೋಧ ಪಕ್ಷಗಳ 32ಕ್ಕೂ ಹೆಚ್ಚು ನಾಯಕರು ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಯೋಜಿಸಿದ್ದ ನಿರ್ಣಾಯಕ ಸಭೆಯಲ್ಲಿ ಭಾಗವಹಿಸಿದ್ದರು. ಇಲ್ಲಿ ವ್ಯಾಗ್ನರ್ ಗುಂಪು ಸರ್ವಾಧಿಕಾರಿಯನ್ನು ಪ್ರಶ್ನಿಸಬಹುದು ಎಂಬುದನ್ನು ತೋರಿಸಿದೆ. ಅದು ಮೋದಿ ಅಥವಾ ಪುಟಿನ್ ಯಾರೇ ಆಗಲಿ ಎಂದು ಸಾಮ್ನಾ ಸಂಪಾದಕೀಯ ಹೇಳಿದೆ.
ಭಾರತದಲ್ಲಿ ವ್ಯಾಗ್ನರ್ ಗ್ರೂಪ್ ಅಹಿಂಸಾತ್ಮಕವಾಗಿ, ಮತಪೆಟ್ಟಿಗೆಯ ಮೂಲಕ ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ ಎಂದು ಸಾಮ್ನಾ ಸಂಪಾದಕೀಯ ಹೇಳಿದೆ. ಪುಟಿನ್ ಅವರಂತೆ ಮೋದಿಯೂ ಹೋಗಬೇಕು. ಆದರೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋಗಬೇಕು ಎಂದು ಶಿವಸೇನಾ(UBT) ಹೇಳಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧ ಖಾಸಗಿ ಸೇನೆ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರು ಸಶಸ್ತ್ರ ದಂಗೆಗೆ ಕರೆ ನೀಡಿದ್ದರು. ಬಳಿಕ ಬೆಲಾರಸ್ ಅಧ್ಯಕ್ಷರು ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿ, ರಷ್ಯಾದಲ್ಲಿ ರಕ್ತಪಾತ ತಡೆಯಲು ಮಾಸ್ಕೋ ಮುತ್ತಿಗೆ ಹಿಂಪಡೆಯುತ್ತಿರುವುದಾಗಿ ಪ್ರಿಗೋಜಿನ್ ಹೇಳಿದ್ದರು.