ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಗಳ ಹಬ್ಬ ದೀಪಾವಳಿಗೆ ನ್ಯೂಯಾರ್ಕ್ ನಗರದಲ್ಲಿ ಶಾಲಾ ರಜೆ ಘೋಷಣೆ ಮಾಡಲಾಗಿದೆ. ಅಲ್ಲಿನ ಮೇಯರ್ ಎರಿಕ್ ಆಡಮ್ಸ್ ಸೋಮವಾರ ಈ ಮಹತ್ವದ ನಿರ್ಧಾರ ಪ್ರಟಿಸಿದರು. ಕತ್ತಲೆಯ ಮೇಲೆ ಬೆಳಕಿನ ವಿಜಯದ ಸ್ಮರಣಾರ್ಥ ಸಾವಿರಾರು ನ್ಯೂಯಾರ್ಕ್ ನಿವಾಸಿಗಳು ಪ್ರತಿ ವರ್ಷ ದೀಪಾವಳಿಯನ್ನು ಆಚರಿಸುತ್ತಾರೆ. ಹೀಗಾಗಿ ಅಲ್ಲಿನ ರಾಜ್ಯ ಶಾಸಕರು ಇತ್ತೀಚೆಗೆ ಅಮೆರಿಕದ ಶಾಲಾ ವ್ಯವಸ್ಥೆಯಲ್ಲಿ ದೀಪಾವಳಿ ಹಬ್ಬದಂದು ರಜಾದಿನವಾಗಿ ಗೊತ್ತುಪಡಿಸುವ ಕಾನೂನನ್ನು ಜಾರಿಗೊಳಿಸಿದ ನಂತರ ಈ ಪ್ರಕಟಣೆ ಹೊರಬಿದ್ದಿದೆ.
ಮೇಯರ್ ಎರಿಕ್ ಆಡಮ್ಸ್ ಈ ಕ್ಷಣವನ್ನು ಸ್ಥಳೀಯ ಕುಟುಂಬಗಳಿಗೆ ಮಹತ್ವದ ಗೆಲುವು ಎಂದು ಕರೆದರು. “ದೀಪಾವಳಿಯಂದು ಶಾಲೆಗೆ ರಜೆ ನೀಡುವ ಹೋರಾಟದಲ್ಲಿ ಅಸೆಂಬ್ಲಿ ಸದಸ್ಯ @JeniferRajkumar ಸಮುದಾಯದ ಮುಖಂಡರೊಂದಿಗೆ ನಿಂತಿದ್ದಕ್ಕಾಗಿ ನಾನು ತುಂಬಾ ಹೆಮ್ಮೆಪಡುತ್ತೇನೆ. ಶುಭ ದೀಪಾವಳಿ!.” ಎಂದು ಮೇಯರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಈ ವರ್ಷ ನವೆಂಬರ್ 12ರ ಭಾನುವಾರದಂದು ದೀಪಾವಳಿಯನ್ನು ಆಚರಿಸಲಾಗುತ್ತದೆ, ಆದ್ದರಿಂದ 2024ರಲ್ಲಿ ದೀಪಾವಳಿ ಹಬ್ಬದಂದು ಮೊದಲ ಬಾರಿಗೆ ಶಾಲೆಗೆ ರಜೆ ಇರುತ್ತದೆ ಎಂದು ತಿಳಿಸಿದರು.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, 2015 ರಲ್ಲಿ, ನಗರವು ಎರಡು ಪ್ರಮುಖ ಮುಸ್ಲಿಂ ರಜಾದಿನಗಳಾದ ಈದ್ ಅಲ್-ಫಿತರ್ ಮತ್ತು ಈದ್ ಅಲ್-ಅಧಾ ಗೌರವಾರ್ಥವಾಗಿ ಶಾಲೆಗಳಿಗೆ ರಜೆ ನೀಡುವುದಾಗಿ ಘೋಷಿಸಿತ್ತು. ಆ ಸಾಲಿಗೆ ಈಗ ದೀಪಾವಳಿ ಕೂಡ ಸೇರಿದೆ.