ಇಂದು ಧಾರವಾಡ-ಬೆಂಗಳೂರು ವಂದೇ ಭಾರತ್​ ರೈಲಿಗೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಧಾರವಾಡ-ಬೆಂಗಳೂರು ವಂದೇ ಭಾರತ್​ ರೈಲಿಗೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಭೂಪಾಲ್​ ರೈಲು ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಕಾರ್ಯಕ್ರಮದ ಮೂಲಕ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಇದರೊಂದಿಗೆ ಬೇರೆ ನಾಲ್ಕು ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೂ ಚಾಲನೆ ನೀಡಲಿದ್ದಾರೆ.

ಧಾರವಾಡ ರೈಲು ನಿಲ್ದಾಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಥಾವರ್ ಚಂದ್ ಗೆಹ್ಲೋಟ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗಿಯಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ವರ್ಚುಯಲ್​ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಬೆಂಗಳೂರು ಧಾರವಾಡ ವಂದೇ ಭಾರತ್​ ರೈಲು ವೇಳಾಪಟ್ಟಿ :

ಈ ರೈಲು ಪ್ರತಿ ಮಂಗಳವಾರ ಹೊರತುಪಡಿಸಿ, ವಾರದ ಆರು ದಿನವೂ ಸಂಚಾರ ನಡೆಸಲಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಡುವ ವಂದೇ ಭಾರತ ಎಕ್ಸ್​​ಪ್ರೆಸ್​​, 5.55ಕ್ಕೆ ಯಶವಂತಪುರ, 9.15 ಕ್ಕೆ ದಾವಣಗೆರೆ, 11.30ಕ್ಕೆ ಎಸ್‌ಎಸ್ಎಸ್ ಹುಬ್ಬಳ್ಳಿ, ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ.

ಧಾರವಾಡ ನಿಲ್ದಾಣದಿಂದ ಮಧ್ಯಾಹ್ನ 1.15 ಕ್ಕೆ ಹೊರಡುವ ಈ ರೈಲು, 1.35ಕ್ಕೆ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಎಸ್‌ಎಸ್‌ಎಸ್ ಹುಬ್ಬಳ್ಳಿ ಗೆ ಆಗಮಿಸಲಿದ್ದು, 3.38ಕ್ಕೆ ದಾವಣಗೆರೆ, ರಾತ್ರಿ 7.13ಕ್ಕೆ ಯಶವಂತಪುರ ಹಾಗೂ 7.45ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. ಈ ಎರಡು ನಗರಗಳ ನಡುವಿನ ಪ್ರಯಾಣದ ಸಮಯ 6.15 ನಿಮಿಷ ಆಗಿರಲಿದೆ. ಕೆಎಸ್‌ಆ‌ರ್​ ಬೆಂಗಳೂರು – ಧಾರವಾಡ ವಂದೇ ಭಾರತ್ ರೈಲು ಸದ್ಯ 8 ಬೋಗಿಗಳೊಂದಿಗೆ ಸಂಚಾರ ಮಾಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!