ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ಪಟ ಜ್ಯೂ.ಎನ್‌ಟಿಆರ್ ಅಭಿಮಾನಿ ಶ್ಯಾಮ್ ಅನುಮಾನಾಸ್ಪದ ಸಾವು ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿದೆ. ಜೂನ್ 25 ರಂದು ತಮ್ಮ ಅಜ್ಜಿಯ ಊರಾದ ಕೋನಸೀಮಾ ಜಿಲ್ಲೆಯ ಕೊತಪೇಟ್ ಮಂಡಲದ ಮೊಡೆಕುರ್ರುವಿಗೆ ಬಂದಿದ್ದಾಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಶ್ಯಾಮ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತಲ್ಲದೆ, ಕೈ ಮೇಲೆ ಹಲವು ಬಾರಿ ಬ್ಲೇಡ್‌ನಿಂದ ಕೊಯ್ದ ಗುರುತುಗಳು ಕಂಡುಬಂದಿವೆ. ಪೊಲೀಸರು ಈಗಾಗಲೇ ಘಟನೆಯನ್ನು ಅನುಮಾನಾಸ್ಪದ ಪ್ರಕರಣ ಎಂದು ದಾಖಲಿಸಿಕೊಂಡಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಯಿತು.
ಸೋಶಿಯಲ್ ಮೀಡಿಯಾದಲ್ಲಿ ಎನ್ಟಿಆರ್ ಅಭಿಮಾನಿಯಾಗಿ ಚಿರಪರಿಚಿತರಾಗಿರುವ ಶ್ಯಾಮ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರಿಂದ ಎನ್ಟಿಆರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶ್ಯಾಮ್ ಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸುತ್ತಿದ್ದಾರೆ. ನಾರಾ ಲೋಕೇಶ್, ಚಂದ್ರಬಾಬು ಮುಂತಾದವರು ಈಗಾಗಲೇ ಈ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ, ಈಗ ಜ್ಯೂ. ಎನ್‌ಟಿಆರ್ ಕೂಡ ಈ ವಿಷಯದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರವನ್ನು ಬಿಡುಗಡೆ ಮಾಡಿರುವ ಅವರು, “ಶ್ಯಾಮ್ ಅವರ ಸಾವು ಅತ್ಯಂತ ದುಃಖಕರ ಘಟನೆ, ಶ್ಯಾಮ್ ಕುಟುಂಬಕ್ಕೆ ನನ್ನ ಆಳವಾದ ಸಂತಾಪ. ಅವರು ಹೇಗೆ ಸತ್ತರು ಎಂದು ತಿಳಿಯದಿರುವುದು ಹೃದಯ ವಿದ್ರಾವಕವಾಗಿದೆ, ಈ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ನಾನು ಸರ್ಕಾರಿ ಅಧಿಕಾರಿಗಳನ್ನು ವಿನಂತಿಸುತ್ತೇನೆ,” ಎಂದು ಜೂನಿಯರ್ ಎನ್‌ಟಿಆರ್ ಬಿಡುಗಡೆ ಮಾಡಿದ ಪತ್ರದಲ್ಲಿ ತಿಳಿಸಿದ್ದಾರೆ.