ಹೊಸದಿಗಂತ ವರದಿ, ಮಡಿಕೇರಿ:
ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅರಕಲಗೋಡು ಜೆಡಿಎಸ್ ಶಾಸಕ ಎ.ಮಂಜು ಅವರು ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಮ್ಮ ಪುತ್ರ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರ ಕಾರ್ಯವೈಖರಿಯನ್ನು ವೀಕ್ಷಿಸುವ ಕುತೂಹಲದಿಂದ ಮಂಜು ಉಪಸ್ಥಿತರಿದ್ದರೇ ಎನ್ನುವ ಸಂಶಯವನ್ನು ಹುಟ್ಟು ಹಾಕಿದರು.ಅಲ್ಲದೆ ಚರ್ಚೆಗೂ ಗ್ರಾಸವಾದರು.
ಕರ್ನಾಟಕ ರಾಜ್ಯ ಕೃಷಿ ಸಹಕಾರ ಮಂಡಲದ (ಎಸ್‍ಎಲ್‍ಡಿಪಿ) ನಿರ್ದೇಶಕನಾಗಿ ನನಗೆ ಕೊಡಗು, ಹಾಸನ ಉಸ್ತುವಾರಿ ಇದೆ. ನನಗೆ ಸಭೆಗೆ ಆಹ್ವಾನ ಇದೆ. ಹಾಗಾಗಿ ನಾನು ಕೂಡ ಕೆಡಿಪಿ ಸಭೆಗೆ ಬಂದಿದ್ದೇನೆ. ಅದಕ್ಕೆ ಅಧಿಕಾರಿಗಳ ಸಾಲಲ್ಲಿ ಕುಳಿತು ಸಭೆಯಲ್ಲಿ ಭಾಗಿಯಾಗಿದ್ದೇನೆ ಎಂದು ಸಮಜಾಯಿಷಿಕೆ ನೀಡಿದರು. ಜೊತೆಗೆ ಮಗ ನಡೆಸುವ ಸಭೆ ನೋಡಿ ಖುಷಿ ಆಗಿದೆ ಎಂದು ಬಳಿಕ ಸುದ್ದಿಗಾರರಿಗೆ ಅವರು ತಿಳಿಸಿದರು.
ಒಂದು ತಿಂಗಳಿಗೇ ಗೊತ್ತಾಗಿದೆ:
ಅಗತ್ಯ ವಸ್ತುಗಳ ಬೆಲೆ ಏರಿಕೆ, ಗ್ಯಾರಂಟಿಗಳ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಂಜು, ಟ್ವೀಟ್ ಮಾಡಿರೋದು ಸರಿಯಾಗಿಯೇ ಇದೆ, ಬಿಜೆಪಿಯವರು ಸರಿಯಿಲ್ಲ ಎಂದು ಕಾಂಗ್ರೆಸ್‍ಗೆ ರಾಜ್ಯದ ಜನ ಓಟು ಹಾಕಿದರು. ಬಿಜೆಪಿ ಬಗ್ಗೆ 5 ವರ್ಷದ ಬಳಿಕ ಗೊತ್ತಾಯ್ತು, ಆದರೆ ಕಾಂಗ್ರೆಸ್ ಏನೆಂದು ಒಂದು ತಿಂಗಳಿಗೇ ಜನರಿಗೆ ಗೊತ್ತಾಗಿದೆ ಎಂದು ಕುಹಕವಾಡಿದರು.
ಮಾತು ಉಳಿಸಿಕೊಳ್ಳಿ:
ಸೌಕರ್ಯ ಕೊಡ್ತೀವಿ ಅಂತ ಗೆದ್ದಿದೀರಾ, ಜನರನ್ನು ಸೌಕರ್ಯ ವಂಚಿತರನ್ನಾಗಿ ಮಾಡಬೇಡಿ, ನುಡಿದಂತೆ ನಡೆಯಿರಿ. ಅಕ್ಕಿ ವಿಚಾರದಲ್ಲಿ ಕೇಂದ್ರದ ಪಾಲೇನು ಮತ್ತು ರಾಜ್ಯದ ಪಾಲೇನು ಅನ್ನೋದು ಈಗ ಗೊತ್ತಾಗಿದೆ. ಕೇಂದ್ರದ ಪಾಲನ್ನು ಇವರು ನಮ್ಮದು ಎನ್ನೋಕ್ಕಾಗಲ್ಲ, ಅವರಿಗೆ ಕರ್ನಾಟಕ ಒಂದಲ್ಲ, ಇಡೀ ದೇಶ ಇದೆ. ಚುನಾವಣೆ ವೇಳೆ ನೀವು 10 ಕೆಜಿ ಕೊಡ್ತೀವಿ ಅಂದಿದ್ರಿ, ಹಾಗಾಗಿ ಆ 10 ಕೆಜಿಯನ್ನು ಹೇಗಾದ್ರೂ ಕೊಡಿ, ಸಾಲವಾದರೂ ಮಾಡಿ, ಏನಾದರೂ ಮಾಡಿ ಕಾಂಗ್ರೆಸ್ ಸರ್ಕಾರ ಮಾತು ಉಳಿಸಿಕೊಳ್ಳಬೇಕು ಎಂದರು.