ದೇಶದ ಹಲವೆಡೆ ಭಾರೀ ಮಳೆ: ಮುಂಬೈ, ಉತ್ತರಾಖಂಡ, ಹಿಮಾಚಲದಲ್ಲಿ ಅಲರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದ ಹಲವೆಡೆ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗೋವಾ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಗೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. “ಮುಂದಿನ ಐದು ದಿನಗಳಲ್ಲಿ ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ” ಎಂದು ಬುಲೆಟಿನ್‌ನಲ್ಲಿ ಹೇಳಿಕೆ ನೀಡಿದೆ.

ಜುಲೈ 5 ರವರೆಗೆ ಉತ್ತರಾಖಂಡದಾದ್ಯಂತ ಧಾರಾಕಾರ ಮಳೆಯಾಗಲಿದ್ದು, ಮುಂದಿನ ದಿನಗಳಲ್ಲಿ ಡೆಹ್ರಾಡೂನ್ ಜೊತೆಗೆ ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಳೆಗಾಲದಲ್ಲಿ ಪ್ರಯಾಣಿಸದಂತೆ ಹವಾಮಾನ ಇಲಾಖೆ ನಿರ್ದೇಶಕ ಬಿಕ್ರಮ್ ಸಿಂಗ್ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಭಾರೀ ಮಳೆಯಿಂದಾಗಿ ಉತ್ತರಾಖಂಡ್ ಆಡಳಿತವು ಅಲರ್ಟ್ ಆಗಿದೆ. ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.

ಜುಲೈ 1 ರವರೆಗೆ ಹಿಮಾಚಲದಲ್ಲಿ ಭಾರೀ ಮಳೆಯ ಎಚ್ಚರಿಕೆ

ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಜೂನ್ 30 ಮತ್ತು ಜುಲೈ 1 ರಂದು ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.  ಹಿಮಾಚಲ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಕೇಂದ್ರ ಸರ್ಕಾರವು ಮಳೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ವೇಗಗೊಳಿಸಲು ವಿಶೇಷ ಪ್ಯಾಕೇಜ್ ನೀಡುವಂತೆ ಕೇಳಿದ್ದಾರೆ. ಹಿಮಾಚಲದಲ್ಲಿ ಕಳೆದ 24 ಗಂಟೆಗಳಲ್ಲಿ, ಮುಳುಗಡೆ, ಭೂಕುಸಿತ ಮತ್ತು ರಸ್ತೆ ಅಪಘಾತಗಳಂತಹ ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ (ಇಒಸಿ) ತಿಳಿಸಿದೆ.

ಗೋವಾದ ಪಣಜಿಯಲ್ಲಿ ಪ್ರವಾಹ

ಮಂಗಳವಾರ ರಾತ್ರಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಗೋವಾದ ರಾಜಧಾನಿ ಪಣಜಿಯ ಹಲವು ಭಾಗಗಳು ಜಲಾವೃತಗೊಂಡಿವೆ. ಪಣಜಿ ಸಿಟಿ ಕಾರ್ಪೊರೇಷನ್ (ಸಿಸಿಪಿ) ಕಾರ್ಯಕರ್ತರು ಕಸದಿಂದ ಮುಚ್ಚಿಹೋಗಿರುವ ಚರಂಡಿಗಳನ್ನು ತೆರವುಗೊಳಿಸುತ್ತಿರುವುದು ಕಂಡುಬಂದಿದೆ.

ಮಹಾರಾಷ್ಟ್ರದಲ್ಲಿ ಭಾರೀ ಮಳೆ
ಏತನ್ಮಧ್ಯೆ, ಪೂರ್ವ ಮಹಾರಾಷ್ಟ್ರದ ಗೊಂಡಿಯಾ ಮತ್ತು ಭಂಡಾರಾ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಪೂಜಾರಿತೋಳ ಅಣೆಕಟ್ಟಿನ ನಾಲ್ಕು ಗೇಟ್‌ಗಳನ್ನು ತೆರೆಯಲಾಗಿದೆ. ಗೊಂಡಿಯಾ ಜಿಲ್ಲಾಧಿಕಾರಿ ಚಿನ್ಮಯ್ ಗೋತ್ಮಾರೆ ಅವರು ನದಿಯ ದಡದಲ್ಲಿ ವಾಸಿಸುವ ಜನರು ಜಾಗೃತರಾಗಿರಲು ಹೇಳಿದರು. ಗುರುವಾರದವರೆಗೆ ಮುಂಬೈ ಮತ್ತು ಥಾಣೆ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಿದೆ. ಏತನ್ಮಧ್ಯೆ, ಪಾಲ್ಘರ್ ಮತ್ತು ರಾಯಗಢ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬುಧವಾರ ಮುಂಬೈನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!