ಹೊಸದಿಗಂತ ವರದಿ ಹಾವೇರಿ :
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ಬಸ್ ನಿಲ್ದಾಣದ ಮೇಲಿನಿಂದ ವ್ಯಕ್ತಿಯೋರ್ವ ಕೆಳಗೆ ಬಿದ್ದು ಗಾಯಗೊಂಡ ಅಲ್ಪ ಸಮಯದಲ್ಲೇ ಸ್ಥಳಕ್ಕಾಗಮಿಸಿದ 108 ವಾಹನ ಸಿಬ್ಬಂದಿ ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.
ಬಸ್ ನಿಲ್ದಾಣದ ಆವರಣದಲ್ಲಿರುವ ಕಟ್ಟಡದ ಮೇಲಿನಿಂದ ಬಿದ್ದ ವ್ಯಕ್ತಿಯನ್ನು ಬೆಳಗಾವಿ ಮೂಲದ 36 ವರ್ಷದ ಸಂಗಪ್ಪ ರಾಯಪ್ಪ ಎಂದು ಗುರುತಿಸಲಾಗಿದೆ.
ಸಂಗಪ್ಪ ರಾಯಪ್ಪಗೆ ಕೈಕಾಲು ಹಾಗೂ ಸೊಂಟಕ್ಕೆ ಹೆಚ್ಚಿನ ಪೆಟ್ಟು ಬಿದ್ದು ನರಳುವುದನ್ನು ಗಮನಿಸಿದ ಸಾರ್ವಜನಿಕರು 108ಕ್ಕೆ ಕರೆ ಮಾಡಿದ್ದಾರೆ. ಫೋನ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ 108 ವಾಹನ ಸಿಬ್ಬಂದಿಗಳಾದ ಪ್ರಶಾಂತ ಹಾಗೂ ಸಂತೋಷ ಅವರು ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುವಿನ ರಕ್ಷಣೆಗೆ ಶೀಘ್ರದಲ್ಲೇ ಧಾವಿಸಿದ ಸಿಬ್ಬಂದಿಗೆ ಸಾರ್ವಜನಿಕರು ಪ್ರಶಂಸೆ ನೀಡಿದ್ದಾರೆ.