ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ವಿಚಕ್ರ, ತ್ರಿಚಕ್ರ ವಾಹನಗಳು, ಕೃಷಿ ವಾಹನಗಳಾದ ಟ್ರ್ಯಾಕ್ಟರ್ ಸೇರಿದಂತೆ ಇತರ ವಾಹನಗಳನ್ನು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಶೀಘ್ರದಲ್ಲೇ ನಿಷೇಧಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಈ ವಾಹನಗಳ ನಿಷೇಧದ ಕುರಿತಾಗಿ ಶೀಘ್ರವೇ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಮುಂದಿನ 10 ರಿಂದ 15 ದಿನಗಳ ಒಳಗಾಗಿ ಜಾರಿಯಾಗುವ ಸಾಧ್ಯತೆ ಇದೆ. ಮಾರ್ಚ್‌ನಲ್ಲಿ ಪ್ರಧಾನಿಯಿಂದ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದ ಈ ರಸ್ತೆ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದು, ಈ ಹೆದ್ದಾರಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಕೇವಲ 90 ನಿಮಿಷಗಳಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತಲುಪಲು ಪ್ರಯಾಣಿಕರಿಗೆ ಸಹಾಯ ಮಾಡುವ 119-ಕಿಮೀ ಉದ್ದದ ಈ ಹೆದ್ದಾರಿಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ನಿಷೇಧದ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಈ ವಾಹನಗಳು ಪ್ರತಿ ಗಂಟೆಗೆ 120 ಕಿ.ಮೀ. ವೇಗದಲ್ಲಿ ಚಲಿಸುವ ಇತರ ವಾಹನಗಳಿಗೆ ಅಡೆತಡೆಯನ್ನುಂಟು ಮಾಡುತ್ತವೆಂದು ಹೇಳಲಾಗುತ್ತಿದೆ.
ಸೂಪರ್‌ಬೈಕ್‌ಗಳಿಗೆ ಮಾತ್ರ ಈ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶ ನೀಡಬಹುದೆಂದು ಚರ್ಚೆ ಮಾಡಲಾಗಿತ್ತು. ಆದರೆ ಬೈಕ್ ಚಲಾಯಿಸುವವರು ಹೆಚ್ಚಾಗಿ ರಸ್ತೆಯಲ್ಲಿ ಶಿಸ್ತನ್ನು ಅನುಸರಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಅವುಗಳನ್ನು ಸಹ ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ.
ದೆಹಲಿ-ಮೀರತ್ ಮತ್ತು ದೆಹಲಿ-ವಡೋದರಾ ಎಕ್ಸ್‌ಪ್ರೆಸ್‌ವೇಗಳ ಮಾರ್ಗದಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧಿಸಿದಂತೆಯೇ ಇಲ್ಲಿ ಸಹ ನಿಷೇಧ ಮಾಡಲಾಗುವುದು. ಸೂಚನೆ ಬಂದ ತಕ್ಷಣವೇ ನಿಷೇಧವನ್ನು ಜಾರಿಗೊಳಿಸಲಾಗುವುದು. ಮೇಲಿನ ಎಲ್ಲಾ ಪ್ರಕ್ರಿಯೆಗಳು 10 ರಿಂದ15 ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್ ತಿಳಿಸಿದ್ದಾರೆ.