ಹೊಸದಿಗಂತ ವರದಿ ವಿಜಯಪುರ:
ಬಟ್ಟೆ ತೊಳೆಯಲು ಹೋದ ವೇಳೆ ಭೀಮಾ ನದಿಯಲ್ಲಿ ತಾಯಿ, ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಭೀಮಾ ನದಿ ತೀರದಲ್ಲಿ ನಡೆದಿದೆ.
ಗ್ರಾಮದ ಗೀತಾ ಹೊನ್ನೂರ (38), ಶೋಭಿತಾ (12) ಮತ್ತು ವಾಸುದೇವ (10) ಮೃತಪಟ್ಟ ತಾಯಿ ಮಕ್ಕಳು.
ಗೀತಾ ಹೊನ್ನೂರ ಭೀಮಾ ನದಿಯ ದಡದಲ್ಲಿ ಬಟ್ಟೆ ತೊಳೆಯುವಾಗ ಆಕೆಯ ಮಗ ವಾಸುದೇವ ನದಿಗೆ ಇಳಿದಿದ್ದಾನೆ. ಇದನ್ನು ನೋಡಿದ ಅಕ್ಕ ಶೋಭಿತಾ ತಮ್ಮನನ್ನು ರಕ್ಷಿಸಲು ಹೋಗಿದ್ದು, ಈಜು ಬಾರದೇ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಕಂಡ ತಾಯಿ ಗೀತಾ ಗಾಬರಿಗೊಂಡು ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದು, ಮಕ್ಕಳೊಡನೆ ತಾನೂ ದಾರುಣವಾಗಿ ಸಾವಿಗೀಡಾಗಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.