ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಆತಿಥೇಯ ಕೊರಿಯಾ ತಂಡದ ಎದುರು ಭಾರತ ತಂಡ ಆಮೋಘ ಪ್ರದರ್ಶನ ತೋರುವ ಮೂಲಕ 8ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಕಳೆದ ಮೂರು ದಿನಗಳ ಕಾಲ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವು 42-32 ಅಂತರದಲ್ಲಿ ಕೊರಿಯಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಚಾಂಪಿಯನ್‌ಶಿಪ್ ಕೊರಿಯಾದ ಬೂಸಾನ್‌ನಲ್ಲಿ ಜೂನ್ 27ರಂದು ಆರಂಭವಾಗಿತ್ತು. 6 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಭಾರತ ಗೆದ್ದು ಸಂಭ್ರಮಿಸಿದೆ.
1980ರಲ್ಲಿ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಆರಂಭಗೊಂಡಿತ್ತು. ಈ ಆವೃತ್ತಿಯೂ ಸೇರಿದಂತೆ 9 ಬಾರಿ ಈ ಟೂರ್ನಿ ಆಯೋಜನೆಗೊಂಡಿದ್ದು, ಭಾರತ 8 ಬಾರಿ ಚಾಂಪಿಯನ್ ಆಗುವ ಮೂಲಕ ಕಬಡ್ಡಿ ಸಾಮ್ರಾಟನಾಗಿ ಹೊರಹೊಮ್ಮಿದೆ.
ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ಕಬಡ್ಡಿ ತಂಡವು ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ರನ್ನರ್ ಅಪ್ ಇರಾನ್ ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಇನ್ನು 5 ಪಂದ್ಯಗಳ ಪೈಕಿ 3 ಪಂದ್ಯಗಳನ್ನು ಜಯಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಚೈನೀಸ್ ತೈಪೆ ತಂಡವು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿತು.
ಇನ್ನು ಭಾರತ ಕಬಡ್ಡಿ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.